ರಾಮನಗರ: ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ವರ್ಗ-ನರಕ ವಿಚಾರವಾಗಿ ಮಹಿಳೆಯರ ವಿರುದ್ಧದ ಹೇಳಿಕೆ ಕುರಿತು ಸಂಪೂರ್ಣ ವರದಿ ತಯಾರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಗರ ಜಿಲ್ಲೆಯ ರಾಮೋಹಳ್ಳಿ ಬಳಿ ನಡೆಯುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋನ 11ನೇ ಆವೃತ್ತಿಯಲ್ಲಿ ಸ್ವರ್ಗ ಮತ್ತು ನರಕ ಎಂಬ ಪ್ರತ್ಯೇಕತೆ ಸೃಷ್ಟಿಸಿರುವುದು ತಿಳಿದು ಬಂದಿದೆ. ನರಕದಲ್ಲಿ ಇರುವ ಮಹಿಳಾ ಸ್ಪರ್ಧಿಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಹಾಗೂ ಹೆಣ್ಣುಮಕ್ಕಳ ಕುರಿತು ಅಪಹಾಸ್ಯ ಮಾತನಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಈ ಕುರಿತು ಕೆಲ ರಾಜ್ಯದ ಕೆಲ ಸಂಘಟನೆಗಳು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ನಾಗಲಕ್ಷ್ಮಿ ಅವರಿಗೆ ಮನವಿ ಕೊಟ್ಟಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ಈ ಹಿನ್ನೆಲೆ ಅಧ್ಯಕ್ಷೆ ನಾಗಲಕ್ಷ್ಮಿ ಅವರು ನಮಗೆ ಪತ್ರ ಬರೆದಿದ್ದು, ತನಿಖೆ ನಡೆಸಿ ವರದಿ ಕೊಡುವಂತೆ ತಿಳಿಸಿದ್ದಾರೆ ಎಂದರು.
ನೋಟಿಸ್ ಜಾರಿ:
ಈಗಾಗಲೆ ಸಂಭಂದಪಟ್ಟ ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವರು ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಸಹ ನೋಡಿದ್ದಾರೆ. ಶೀಘ್ರವೇ ಅಲ್ಲಿ ಏನು ನಡೆಯುತ್ತಿದೆ ಎನ್ನುವುದರ ಕುರಿತು ಸಮಗ್ರ ತನಿಖೆ ನಡೆಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸಂಪೂರ್ಣ ವರದಿ ಸಲ್ಲಿಸುತ್ತೇವೆ ಎಂದು ಕಾರ್ತಿಕ್ ಅವರು ತಿಳಿಸಿದ್ದಾರೆ.