ಇಂದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ವಿಶೇಷ ದಿನವಾಗಿದ್ದು, ಸ್ಯಾಂಡಲ್ ವುಡ್ ನ ಮೂವರು ದಿಗ್ಗಜರ ಜನ್ಮದಿನ ಇಂದು ಒಂದೇ ದಿನವಾಗಿದೆ. ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಹಿರಿಯ ನಟಿ ಶೃತಿ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆ ಮೂವರು ಕಲಾವಿದರ ಅಭಿಮಾನಿಗಳಿಗೆ ಇಂದು ಸಂತಸದ ದಿನ.
ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳು ಎಂದೂ ಮರೆಯದ ದಿವಂಗತ ನಟ ವಿಷ್ಣುವರ್ಧನ್. ಅವರು ಶಾರೀರಿಕವಾಗಿ ಮರೆಯಾದರೂ, ಅಪಾರ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಜರಾಮರಾಗಿದ್ದು, ವಿಷ್ಣು ದಾದ ಬರ್ತ್ ಡೇ ಹಿನ್ನೆಲೆ ಅವರ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಹಲವು ಕಟೌಟ್ಗಳನ್ನು ನಿಲ್ಲಿಸಲಾಗಿದೆ.
ಉಪೇಂದ್ರ ಅವರ ಪಾಲಿಗೆ ಈ ವರ್ಷದ ಬರ್ತ್ಡೇ ಹೆಚ್ಚು ವಿಶೇಷವಾಗಿದ್ದು, ಅವರು ನಟಿಸಿರುವ ‘ಕಬ್ಜ’ ಸಿನಿಮಾದ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಟೀಸರ್ ಕಂಡು ಅವರ ಅಭಿಮಾನಿಗಳು ಫಿದಾ ಆಗಿದ್ದು, ಕೆಜಿಎಫ್ ಸಿನಿಮಾದಂತೆ ‘ಕಬ್ಜ’ ಜನರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಇನ್ನು, ಹಿರಿಯ ನಟಿ ಶ್ರುತಿ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದವರು. ಒಂದು ಸಮಯದಲ್ಲಿ ಕೌಟುಂಬಿಕ ಜೀವನ ಆಧಾರಿತ ಮತ್ತು ಸಾಮಾಜಿಕ ಸಂದೇಶವುಳ್ಳ ಸಿನಿಮಾಗಳ ಮೂಲಕ ಶೃತಿ ಮನೆ ಮಾತಾಗಿದ್ದರು. ಈಗಲೂ ಅವರಿಗೆ ಆ ಹೆಸರು ಹಾಗೆಯೆ ಇದ್ದು, ಶೃತಿ ಅವರು ಕೂಡ ತನ್ನದೇ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಒಟ್ಟಿನಲ್ಲಿ ಮೂವರು ಸ್ಟಾರ್ ನಟರ ಹುಟ್ಟು ಹಬ್ಬದಿಂದ ಇಂದು ಸ್ಯಾಂಡಲ್ ವುಡ್ ನಲ್ಲಿ ಹಬ್ಬದ ವಾತಾವರಣ ಇದ್ದು, ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಉಂಟಾಗಿದೆ.