ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ತಮ್ಮ ವೃತ್ತಿಜೀವನದಲ್ಲಿ ರೋಚಕ ಹಂತವನ್ನು ಅನುಭವಿಸುತ್ತಿದ್ದಾರೆ. ಜಾಗತಿಕವಾಗಿ ₹600 ಕೋಟಿ ಗಳಿಸಿದ ‘ಜೈಲರ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ, ಅಭಿಮಾನಿಗಳು ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆಗಿನ ಅವರ ಮುಂದಿನ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಟಿಜೆ ಜ್ಞಾನವೇಲ್ ನಿರ್ದೇಶನದ, ಪೊಲೀಸ್ ಕಥಾವಸ್ತುವಿನ ರಜನಿಕಾಂತ್ ಅವರ ಇತ್ತೀಚಿನ ಚಿತ್ರ ‘ವೆಟ್ಟೈಯಾನ್’, ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.
ಮೊದಲ ವಾರದಲ್ಲಿ ಚಿತ್ರವು ₹122 ಕೋಟಿ ಗಳಿಸಿದ್ದು, ವಿಕೇಂಡ್ ನಂತರ ಚಿತ್ರದ ಕಲೆಕ್ಷನ್ ಕುಸಿಯತೊಡಗಿತು. ಎರಡನೇ ಶುಕ್ರವಾರದಲ್ಲಿ ₹2.6 ಕೋಟಿ ಗಳಿಸಿದ ‘ವೆಟ್ಟೈಯಾನ್’, ಶನಿವಾರಕ್ಕೆ ಸುಮಾರು 64% ಏರಿಕೆಯಾಗಿ ₹4.25 ಕೋಟಿ ಗಳಿಸಿದ್ದಾಗಿ Sacnilk ವರದಿ ಮಾಡಿದೆ. ಇದರಿಂದಾಗಿ ಚಿತ್ರದ ಒಟ್ಟು ಕಲೆಕ್ಷನ್ ₹129 ಕೋಟಿ ಆಗಿದ್ದು, ದಿನಾಂತ್ಯಕ್ಕೆ ₹133-134 ಕೋಟಿ ಗಳಿಸಬಹುದು ಎಂಬ ನಿರೀಕ್ಷೆಯಿದೆ. ಮೊದಲ ವಾರದಲ್ಲೇ ₹235 ಕೋಟಿ ಗಳಿಸಿದ್ದ ‘ಜೈಲರ್’ ಚಿತ್ರಕ್ಕೆ ಹೋಲಿಸಿದರೆ ‘ವೆಟ್ಟೈಯಾನ್’ ಹತ್ತಿರದಲ್ಲೂ ಇಲ್ಲದಿದ್ದರೂ, ಚಿತ್ರವು ₹150 ಕೋಟಿ ಕ್ಲಬ್ ತಲುಪಲು ಪ್ರಯತ್ನಿಸುತ್ತಿದೆ.
‘ವೆಟ್ಟೈಯಾನ್’ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್ ಮತ್ತು ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಈ ಚಿತ್ರವು 32 ವರ್ಷಗಳ ನಂತರ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಅವರ ಮಹತ್ವದ ಪುನರ್ಮಿಲನಕ್ಕೆ ಸಾಕ್ಷಿಯಾಗಿದೆ. ಅಮಿತಾಬ್-ರಜನಿ ಜೋಡಿ ಮುಕುಲ್ ಎಸ್. ಆನಂದ್ ಅವರ ‘ಹಮ್’ ಚಿತ್ರದಲ್ಲಿ ಕೊನೆಯದಾಗಿ ಪರದೆಯನ್ನು ಹಂಚಿಕೊಂಡಿದ್ದರು.