ಚೆನ್ನೈ: ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ ಬಹುಭಾಷಾ ಹಿರಿಯ ನಟಿ ವಿಜಯಲಕ್ಷ್ಮಿ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲವು ತಿಂಗಳುಗಳಿಂದ ಒಂದಲ್ಲ ಒಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುವ ಹಿರಿಯ ನಟಿ ವಿಜಯಲಕ್ಷ್ಮಿ ವಿರುದ್ಧದ ಇತ್ತೀಚಿನ ಪೊಲೀಸ್ ಪ್ರಕರಣವು ಚಿತ್ರರಂಗದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
ಒಂದು ಕಾಲದ ಟಾಪ್ ನಟಿಯಾಗಿದ್ದ ನಟಿ ವಿಜಯಲಕ್ಷ್ಮಿ ಅವರು ಕನ್ನಡದಲ್ಲಿ ನಾಗಮಂಡಲ, ಜೋಡಿಹಕ್ಕಿ, ಹಬ್ಬ, ಯಜಮಾನ, ಸ್ವಸ್ತಿಕ್, ಭೂಮಿ ತಾಯಿಯ ಚೊಚ್ಚಲ ಮಗ, ಮಾತಿನ ಮಲ್ಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.
ಆ ನಂತರ ನಟಿ ವಿಜಯಲಕ್ಸ್ಮಿ ಅವರು ವಿವಿಧ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಅನಂತರ ಒಬ್ಬ ರಾಜಕಾರಣಿ ತನ್ನನ್ನು ಬಳಸಿಕೊಂಡು ಬಿಟ್ಟಿದ್ದಾನೆ ಎಂದು ಸಂಚಲನ ಆರೋಪವನ್ನು ಮಾಡಿದ್ದರು. ಇದಾದ ಬಳಿಕ ವಿಜಯಲಕ್ಷ್ಮಿ ಅವರು ಸ್ವಲ್ಪ ದಿನಗಳವರೆಗೆ ಬೆಂಗಳೂರಿನಲ್ಲಿದ್ದು, ನಂತರ ಬೆಂಗಳೂರಿನಿಂದ ಚೆನ್ನೈಗೆ ತೆರಳಿ ಪ್ರಸ್ತುತ ತಿರುವನ್ಮಿಯೂರ್ ಎಂಬ ಲಾಡ್ಜ್ನಲ್ಲಿ ತಂಗಿದ್ದರು. ಮತ್ತೆ ಅವರು ರಾಜಕೀಯ ಮುಖಂಡರೊಂದಿಗೆ ಘರ್ಷಣೆ ನಡೆಸಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.
ಈ ಸಂಬಂಧ ವಿಜಯಲಕ್ಷ್ಮಿ ಅವರು ಆತ್ಮಹತ್ಯೆ ಯತ್ನಿಸಿದ ಸ್ವಲ್ಪ ದಿನಗಳ ನಂತರ, ಈಗ ಲಾಡ್ಜ್ ಮಾಲೀಕರು ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಕೆಲವು ತಿಂಗಳುಗಳಿಂದ ಲಾಡ್ಜ್ ಬಾಡಿಗೆಯನ್ನು ಪಾವತಿಸಿಲ್ಲ. ಸುಮಾರು 3 ಲಕ್ಷ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಾರಣಗಳಿಂದ ಪೊಲೀಸರು ವಿಜಯಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.




