ದಾವಣಗೆರೆ ಫೆ.05 : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 2022-2023 ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಪ್ರತಿಭಾನ್ವಿತ ವಸತಿ ಶಾಲೆ ಹಾಗೂ ಮಾಯಕೊಂಡ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮೀಪದ ವಸತಿ ಶಾಲೆಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ, 02 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಶಾಲಾ ದೃಢೀಕರಣ ಪತ್ರ, ಶಾಲಾ ಎಸ್.ಟಿ.ಎಸ್. ನಂಬರ್, ಹಾಗೂ ವಿದ್ಯಾರ್ಥಿಯ ಮತ್ತು ತಂದೆಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವಾಗ ತಾವು ವ್ಯಾಸಂಗ ಮಾಡಲು ಬಯಸುವ ವಸತಿ ಶಾಲೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು. ಶಾಲೆಯ ಆಯ್ಕೆಯ ಕುರಿತು ಯಾವುದೇ ಕೌನ್ಸಿಲಿಂಗ್ ಇರುವುದಿಲ್ಲ. ಅರ್ಜಿಯನ್ನು ಫೆ.22 ರೊಳಗೆ ಆನ್ಲೈನ್ ಮೂಲಕ ಸಲ್ಲಿಸಬೇಕು. ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಮಾರ್ಚ್ 14 ರಿಂದ ಪಡೆದುಕೊಳ್ಳಬಹುದು. ಪ್ರವೇಶ ಪರೀಕ್ಷೆಯು ಮಾರ್ಚ್ 20 ರಂದು ಜರುಗಲಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ http://kea.kar.nic.in ನಿಂದ ಪಡೆಯಬಹುದಾಗಿದೆ. ಸರ್ಕಾರವು ಎಲ್ಲಾ ವರ್ಗದ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶಹೊಂದಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.