ಬೆಳಗಾವಿ: ನಮ್ಮ ಮಾಹಿತಿ ಪ್ರಕಾರ ಬಸವರಾಜ ಬೊಮ್ಮಾಯಿ ಕೇವಲ 6 ತಿಂಗಳ ಸಿಎಂ ಅಷ್ಟೇ, ಬೊಮ್ಮಾಯಿಗೆ ಆರು ತಿಂಗಳು ಮುಖ್ಯಮಂತ್ರಿಯಾಗಲು ಅವಕಾಶ ಕೊಟ್ಟಿದ್ದಾರೆ. ಸಿಎಂ ಮಾಡುವಾಗಲೇ ಬೊಮ್ಮಾಯಿಗೆ 6 ತಿಂಗಳು ಎಂದು ಹೇಳಿದ್ದು, ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರದಲ್ಲಿ ಈ ಬಾರಿಯೂ ಬಿಜೆಪಿ ಸರ್ಕಾರದಲ್ಲಿ ಮೂವರು ಸಿಎಂಗಳು ಆಗುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದು, ಇದೇ ವೇಳೆ ಡಿಸಿಎಂ ಸ್ಥಾನಕ್ಕೆ ಸಚಿವ ಬಿ. ಶ್ರೀರಾಮುಲು ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮುಲುಗೆ ಟಾಂಗ್ ಕೊಟ್ಟ ಜಾರಕಿಹೊಳಿ, ‘ಕೆಲಸ ಮಾಡುವುದಕ್ಕೆ ಡಿಸಿಎಂ ಸ್ಥಾನವೇ ಬೇಕೆಂದು ಇಲ್ಲ. ಡಿಸಿಎಂ ಸ್ಥಾನ ಸಿಗದಿದದ್ದರೂ ಅವ್ರು ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.
ಇನ್ನು, ನಮ್ಮ ಸಮಾಜಕ್ಕೆ ಮೀಸಲಾತಿ ಕೊಡ್ತೇವೆ ಎಂದು ಹೇಳಿದ್ದರು. 7.5ರಷ್ಟು ಮೀಸಲಾತಿ ಕೊಡ್ತೀವಿ ಎಂದು ಮಾತು ಕೊಟ್ಟಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕೊಡ್ತೇವೆ ಅಂದ್ರು. ಆದ್ರೆ, ಇದೀಗ 24 ತಿಂಗಳು ಕಳೆದಿದ್ದು, ಗಿಮಿಕ್ ಮಾಡುತ್ತಿದ್ದಾರೆ. ಭರವಸೆ ನೀಡಿದ್ದಕ್ಕೆ ನಿಮ್ಮ ಪಕ್ಷಕ್ಕೆ ಮತ ಹಾಕಿದ್ದು, ಇದೀಗ ಸಮಾಜ ಮುಂದಿಟ್ಟು ಅಧಿಕಾರ ಪಡೆಯುವ ಗಿಮಿಕ್ ಮಾಡುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.




