ಬೆಂಗಳೂರು: ಕ್ಯಾಂಟರ್ಗೆ ಹಿಂದಿನಿಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಕಂಠೀರವ ಸ್ಟುಡಿಯೋ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಹೌದು, ಚಲಿಸುತಿದ್ದ ಕ್ಯಾಂಟರ್ ಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ ಹೊಡೆದು ಘಟನೆ ಸಂಭವಿಸಿದ್ದು, ರಾತ್ರಿ 12 ಗಂಟೆಯ ಹೊತ್ತಿಗೆ ಲಗ್ಗೆರೆಯಿಂದ ಗೊರಗುಂಟೆಪಾಳ್ಯ ಕಡೆಗೆ ಅಸ್ಸಾಂ ಮೂಲದ ಕುಮಾರ್ ಲಿಂಬು ಮತ್ತು ಸುನಿಲ್ ಬಾಡಿಗೆ ಸ್ಕೂಟರ್ ಬುಕ್ ಮಾಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ರಾಜ್ಕುಮಾರ್ ಸಮಾಧಿ ಬಳಿ ಮುಂಭಾಗದಿಂದ ಹೋಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಇನ್ನು, ರಾಜಾಜಿನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ ಕುಮಾರ್ ಲಿಂಬು ಸ್ಥಳದಲ್ಲೇ ಮೃತಪಟ್ಟಿದ್ದು, ಸುನಿಲ್ ಗೆ ಗಂಭೀರ ಗಾಯಗಳಾಗಿದ್ದವು. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಕೊನೆಯುಸಿರೆಳೆದಿದ್ದಾನೆ.




