ಬದುಕು ಬದಲಿಸಿದ ಕೋವಿಡ್ !

ವಿಶೇಷ ಲೇಖನ: Y.S. ಗಣೇಶ ಕೋವಿಡ್೧೯ ಸಾಂಕ್ರಾಮಿಕ ರೋಗದ ಪಿಡುಗು ಸಾಮಾನ್ಯ ಜೀವನ ವೃತ್ತಿಗಳ ಮಾರ್ಪಾಡಿಗೆ ಒಂದು ರೀತಿಯಲ್ಲಿ ಅನುವು ಮಾಡಿದೆ ಅಂದರೆ ತಪ್ಪಿಲ್ಲ. ಕೆಲವು ಪ್ರದೇಶಗಳು ಅಂದರೆ ನೇಪಾಳ, ಗೋಕರ್ಣ , ಮೈಸೂರು…

coronavirus-update

ವಿಶೇಷ ಲೇಖನ: Y.S. ಗಣೇಶ

ಕೋವಿಡ್೧೯ ಸಾಂಕ್ರಾಮಿಕ ರೋಗದ ಪಿಡುಗು ಸಾಮಾನ್ಯ ಜೀವನ ವೃತ್ತಿಗಳ ಮಾರ್ಪಾಡಿಗೆ ಒಂದು ರೀತಿಯಲ್ಲಿ ಅನುವು ಮಾಡಿದೆ ಅಂದರೆ ತಪ್ಪಿಲ್ಲ.

ಕೆಲವು ಪ್ರದೇಶಗಳು ಅಂದರೆ ನೇಪಾಳ, ಗೋಕರ್ಣ , ಮೈಸೂರು , ಬೆಂಗಳೂರು , ಧಾರ್ಮಿಕ ಪ್ರವಾಸಿ ತಾಣಗಳಾದ ಶೃಂಗೇರಿ , ಕಾಶಿ, ಧರ್ಮಸ್ಥಳ, ಉಡುಪಿ, ಮತ್ತು ದಕ್ಷಿಣ ಭಾರತದ ತಮಿಳು ನಾಡು ಹಾಗು ಕೇರಳ, ಉತ್ತರದ ಪಶ್ಚಿಮ ಬಂಗಾಲ, ದೆಹಲಿ, ರಾಜಸ್ಥಾನ ಹೀಗೆ ಹಲವು ಪ್ರವಾಸಿ ತಾಣಗಳು ಈಗ ಮುಚ್ಚಿದೆ.

Vijayaprabha Mobile App free

ಇದಕ್ಕೆ ತದ್ವಿರುದ್ಧವಾಗಿ ಈಗ ಮತ್ತೊಂದು ಹೊಸ ಪ್ರವಾಸೋದ್ಯಮ ಆರಂಭ ಆಗಿದೆ (ಪರಿಸ್ಥಿತಿಯ ಕಾರಣ) ಇದನ್ನೇ ಮಂದ ಗತಿ ಪ್ರವಾಸ ಎಂದು ತರ್ಜುಮೆ ಮಾಡಬಹುದು. ಅಂದರೆ ಇರುವ ಜಾಗದಲ್ಲೇ ಇರುವ ಎಷ್ಟೋ ಪ್ರವಾಸೀ ಕ್ಷೇತ್ರಗಳನ್ನು (ಎಷ್ಟೋ ಮಂದಿಗೆ ತಮ್ಮ ಹತ್ತಿರ ಇರುವ ತಾಣಗಳ ಬಗ್ಗೆ ಆಳವಾಗಿ ತಿಳಿದಿರುವುದಿಲ್ಲ ಕಾರಣ ಉದಾಸೀನ , ಇಲ್ಲ ಗೊತ್ತು ಎನ್ನುವ ಕುರುಡು ಮೌಢ್ಯ (ಗೊತ್ತಿಲ್ಲದಿದ್ದರೂ) (ಕೆಲವರನ್ನು ಬಿಟ್ಟು).ಒಂದು ಹೊಸತು ಬರಬೇಕಾದರೆ, ಅದಕ್ಕೆ ಪರಿಸ್ಥಿತಿಯ ಸಮಸ್ಯೆಗಳು ಒಂದು ಉತ್ತರ ಹುಡುಕುವ ಚಿಂತನೆ ಮಾಡಲು ಅನುವಾಗುವುದು (ನೆಸೆಸಿಟಿ ಐಸ್ ದಿ ಮದರ್ ಆ ಇನ್ವೆನೇಷನ್ ).

ಯಾವಾಗ ಸಾಂಕ್ರಾಮಿಕ ರೋಗ ಉಲ್ಬಣಿಸಿತು ಸುಮಾರು ಆರು ಏಳು ತಿಂಗಳ ನಂತರ ಕೆಲವರು ನಮಗೆ ಮನೆಯಲ್ಲಿ ಕುಳಿತು ರಾಮಾಯಣ, ಮಹಾಭಾರತ ನೋಡಿ ಇಲ್ಲ ನಾವು ತೆಗೆದಿರುವ ಪ್ರವಾಸೀ ತಾಣಗಳನ್ನು ವೀಡಿಯೋ ಮೂಲಕ ಯೌಟ್ಯೂಬ್ ನಲ್ಲಿ ನೋಡಿ ಎಂದು ಅದರ ಮೂಲಕ ಹಣ ಗಳಿಸುವ ( ಚಂದಾದಾರಿಕೆ ಮೂಲಕ ) ಯೋಜನೆ ಹಾಕಿದ್ದು ಗೊತ್ತಿರುವ ವಿಷಯ.

ಎಷ್ಟೋ ಮಂದಿ ತನ್ಮೂಲಕ ಬೆಳಕಿಗೆ ಬರುವುದಲ್ಲದೆ ಈ ಹೊಸ ಮಂದ ಗತಿಯ ಪ್ರವಾಸವನ್ನು ಹುಟ್ಟು ಹಾಕಿದರು. ಅಮೆರಿಕಾದ ಪ್ರವಾಸೋದ್ಯಮದ ಪ್ರಕಾರ ಈ ಹೊಸ ಮಂದ ಗತಿಯ ಪ್ರವಾಸ ಒಂದು ರೀತಿಯಲ್ಲಿ ನಮ್ಮ ತಿಳುವಳಿಕೆಯನ್ನು ಹಿತ್ತಲಿನಲ್ಲಿ ಓರೇ ಹಚ್ಚುವ ಒಂದು ಹೊಸ ದೃಷ್ಟಿಕೋನ (ಇಲ್ಲಿ ಹಿತ್ತಲು ಅಂದರೆ ನಮ್ಮ ಬೇರು ಇರುವ, ನಮ್ಮ ಮೂಲ ಸ್ಥಾನ ಅಂದರೆ ನಾವು ಹುಟ್ಟಿ ಬೆಳೆದ ಪರಿಸರ. ನಾವು ವಿದೇಶದಲ್ಲಿ ಇದ್ದರೇ ಅಲ್ಲಿಯ ಭೂ ಪರಿಸರದ ಬಗ್ಗೆ ತಿಳಿಯುವುದು ಹಾಗು ನಮ್ಮ ಮೂಲ ಸ್ಥಾನಗಳ(ಹಿತ್ತಲು ) ಬಗ್ಗೆ ಅಲ್ಲಿರುವವರಿಗೆ ಪರಿಚಯಿಸುವುದು.). ಮೇಲೆ ತಿಳಿಸಿದಂತೆ ನಾವು ಎಷ್ಟೋ ಬಾರಿ ನಮ್ಮ ಹತ್ತಿರದ ವಿಷಯಗಳನ್ನು ಉದಾಸೀನದಿಂದ ತಿಳಿಯಲು ಪ್ರಯತ್ನ ಪಡುವುದಿಲ್ಲ.

ಎಷ್ಟು ಜನ ಮೈಸೂರಿನವರು ಇಲ್ಲ ಬೆಂಗಳೂರಿನವರು ಮೈಸೂರು ಅರಮನೆ ದ್ವಾರಗಳ ಹೆಸರನ್ನು ಹೇಳಲು ಶಕ್ತರು?( ಇಲ್ಲ ಯಾವುದೇ ಪ್ರದೇಶದವರಾಗಲಿ) ಎಷ್ಟು ಜನ ಟೀಪು ಸುಲ್ತಾನನ ಅರಮನೆಯನ್ನು ಕೂಲಂಕುಷವಾಗಿ ನೋಡಿರುವರು?. ಎಷ್ಟು ಜನಕ್ಕೆ ತಮ್ಮ ಸ್ಥಳದಲ್ಲಿ ರುಚಿಕರವಾದ ತಿಂಡಿ ,ಊಟ ಕೊಡುವ ಫಲಾಹಾರ ಮಂದಿರ ಗೊತ್ತಿರುವುದು ? ಎಂದಾಗ ಫಲಾಹಾರ ಮಂದಿರ ಗೊತ್ತಿರುವವರು ಜಾಸ್ತಿ ಇರಬಹುದು ಆದರೆ ಕೂಲಂಕುಷವಾಗಿ ತಿಳಿದಿರುವುದಿಲ್ಲ.

ಹೀಗಾಗಿ ಇಂತಹ ಸ್ಥಿತಿಗೆ ಈಗ ತಿಳಿಯಲೇ ಬೇಕು ಎನ್ನುವ ಸ್ಥಿತಿ ಬಂದಿದೆ.ಅಂದರೆ ಈಗ ನಾವೆಲ್ಲಾ ಸಂಸಾರದಲ್ಲಿ ಸೀಮಿತವಾಗಿದ್ದ ಅಡಿಗೆ ,ತಿನಿಸು ಮಾಡುವ ವಿಧಾನ ಕಲೆತಂತೆ.

ಹಾಗಾದರೆ ಈ ಹೊಸ ಮಂದಗತಿಯ ಪ್ರವಾಸ ಹೇಗೆ ಆಗುವುದು ?

ಈಗ ನಾವೆಲ್ಲಾ ಮನೆಯಲ್ಲೇ ಜಾಸ್ತಿ ಇದ್ದು ನಮ್ಮ ತಿಳುವಳಿಕೆ ಇರುವ ಜಾಗದ ಬಗ್ಗೆ ಜಾಸ್ತಿ ಮಾಡಿಕೊಳ್ಳುವುದು. ಸಮಯ ಇದ್ದಾಗ ಹತ್ತಿರದ ತಾಣಗಳಿಗೆ ಹೋಗಿ ಅದರ ಬಗ್ಗೆ ಜಾಸ್ತಿ ವಿಷಯ ಅರಿಯುವುದು. ನಡೆದೋ ಇಲ್ಲ ದ್ವಿಚಕ್ರ ವಾಹನದಲ್ಲಿ ಆ ತಾಣಗಳಿಗೆ ಹೋಗಿ ಹೊಸದನ್ನು ಕಾಣುವುದು ಹೀಗೆ ಹತ್ತಿರದ ತಾಣಗಳಬಗ್ಗೆ ಆಳವಾದ ಜ್ಞಾನ ಪಡೆಯುವುದು.ಹಿಂದಿನ ಪ್ರವಾಸೋದ್ಯಮದಲ್ಲಿ ನಾವು ಸಮಯದ ಅಭಾವದಿಂದ ಎಷ್ಟೋ ವಿಷಯ ತಿಳಿಯಲು ಆಗುತ್ತಿರಲಿಲ್ಲ (ಹಂಪೆ ಸರಿಯಾಗೇ ನೋಡಲು ಒಂದು ೧೫ ರಿಂದ ೨೦ ದಿನಗಳೇ ಬೇಕು ) ಸಾಲಾರ ಜುಂಗ್ , ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ನೋಡಲು ಸುಮಾರು ೧೫ ದಿನಗಳೇ ಬೇಕು (ಕೂಲಂಕುಷವಾಗಿ ತಿಳಿಯಲು) ಇದು ಮಂದ ಪ್ರವಾಸದಲ್ಲಿ ಸಾಧ್ಯ. ಒಂದು ರವಿವರ್ಮನ ಕಲಾ ಚಿತ್ರವನ್ನೇ ಜಾಸ್ತಿ ಅಧ್ಯಯನ ಮಾಡಬಹುದು.

ಮಂದ ಪ್ರವಾಸ ನಮ್ಮ ಹತ್ತಿರದ ಕಲಾ ಕುಶಲಿಗಳ ಬಗ್ಗೆ ತಿಳಿಯಲು ಅನುವಾಗುವುದು ಮತ್ತು ಅವರನ್ನು ಉತ್ತೇಜಿಸಬಹುದು. ವಿದೇಶಿಯ ಪಿಟ್ಸಾ ತಿನಿಸು ಬದಲು ನಮ್ಮ ಹಿಂದಿನ ಅಡುಗೆಗಳ ಬಗ್ಗೆ ತಿಳಿಯಬಹುದು. ಆ ತಿನಿಸುಗಳ ಆವಿರ್ಭಾವ ,ಮೂಲ , ಅದನ್ನು ತಂದ ಸಂಸ್ಕೃತಿ (ಅಂದರೆ ಕದಂಬ -ಅಯ್ಯಂಗಾರ್ ತಿನಿಸು, ಚಕ್ಕುಲಿ ,ಕೋಡುಬಳೆ ದಕ್ಷಿಣ ಭಾರತದ ತಿನಿಸು , ಧೋಕ್ಲಾ ಗುಜರಾತಿ ತಿನಿಸು ಹೀಗೆ) ಅದರ ಚರಿತ್ರೆ ಎಲ್ಲ ತಿಳಿಯಲು ಸಾಧ್ಯವಾಗಿದೆ.

ಮಂದ ಗತಿ ಪ್ರವಾಸ ಅಂದರೆ ನಿಧಾನ ಗತಿ ತರುವುದು ಮತ್ತು ಪದೇ ಪದೇ ಪ್ರವಾಸ ಮಾಡದಿರುವುದು. ಇದಾರಿಂದಾಗಿ ಜನಗಳು ತಮ್ಮ ಸ್ಥಾನಿಕ /ಸ್ಥಳದ ಸಂಸ್ಕೃತಿಯಲ್ಲಿ ಮುಳುಗಬಹುದು. ಒಂದೇ ಜಾಗದಲ್ಲಿ ಇರುವ ಕಾರಣ ಮನದ ಪ್ರವಾಸಿ ಅಭಿಲಾಷೆಯ ವೇಗವನ್ನು ಸ್ಥಳೀಯ ಪುರಾಣ, ಸಂಸ್ಕೃತಿ, ಪ್ರವಾಸಿ ತಾಣಗಳಬಗ್ಗೆ ಇನ್ನು ಹೆಚ್ಚು ತಿಳಿದು ಕೊಳ್ಳಬಹುದು.ಇರುವ ಸ್ಥಳದಲ್ಲೇ ಇನ್ನು ಅನೇಕ ವಿಶೇಷತೆಗಳಬಗ್ಗೆ ಹುಡುಕಾಟ ಮಾಡಬಹುದು. ಕೆಲವರು ತಮ್ಮ ಮನೆಯಲ್ಲಿ ಇರುವ ಹಳೆ ಪದಾರ್ಥಗಳ ಬಗ್ಗೆ ಕುತೂಹಲ ಹಾಗು ಅದರ ವಿಷಯಗಳಬಗ್ಗೆ ತಿಳಿಯಲು ಸಮಯಾವಕಾಶ ಬಂದಿದೆ.ಹಳೆ ಹರದಗಳನ್ನು ತೆಗಯದಿದ್ದಲ್ಲಿ ಅದನ್ನು ಉಪಯೋಗಿಸಿದ ಕಾಲ ಯಾವಾಗ ಕೊಂಡದ್ದು ,ಬಾಲ್ಯದಲ್ಲಿ ಅದನ್ನು ಹೇಗೆ ಇಟ್ಟಿದ್ದೆವು ಹೀಗೆ.ನಮ್ಮ ಹಿಂದಿನ ಪ್ರವಾಸಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ ಎನ್ನುವುದನ್ನೂ ತಿಳಿದುಕೊಳ್ಳುವ /ಮೆಲಕು ಹಾಕುವ ಸಮಯ.

ನಾವು ಮಾಡುತ್ತಿದ್ದ ದುಂದು ವೆಚ್ಚ , ದುರುಪಯೋಗ ಮಾಡುತ್ತಿದ್ದ ವಸ್ತುಗಳು , ಇರುವ ಜಾಗದಲ್ಲಿ ಇದ್ದ ಪರಿಸರ ಮತ್ತು ಅದರ ಅವನತಿ ಬಗ್ಗೆ ಚಿಂತನೆ ಮಾಡಲೂ ಇದು ಅವಕಾಶ ಕೊಟ್ಟಿದೆ.ಹೀಗಾಗಿ ನಮ್ಮ ತಪ್ಪು ತಿದ್ದಿಕೊಳ್ಳುವ ರಚನಾತ್ಮಕ ಕಾರ್ಯವನ್ನು ಇರುವ ಸ್ಥಳದಲ್ಲಿ ಮಾಡುವುದು,ಇಲ್ಲ ಭಾಗಿ ಆಗುವುದು, ಇದ್ದ ಸ್ಥಳದ ಹೊಸ ಜನರೊಂದಿಗೆ ಸಂಪರ್ಕ ಕಲ್ಪಿಸುವುದು ಅವರಿಂದ ಹೊಸ ವಿಚಾರ ಕಲಿಯುವುದು ಇದೆಲ್ಲ ಮಾಡಲು ಇದು ಸುಸಮಯ.

ಈ ಮಂದಗತಿಯ ಪ್ರಯಾಣ /ಪ್ರವಾಸ ಒಂದುರೀತಿಯಲ್ಲಿ , ಮಂದಗತಿಯ ಆಹಾರ ಚಲನೆ (ಸ್ಲೋ ಫುಡ್ ಮೂವ್ಮೆಂಟ್ ) ಇದು ರೋಮಿನಲ್ಲಿ ಶುರುವಾಯಿತು. ಕಾರಣ ಅಮೆರಿಕಾದ ಮ್ಯಾಕ್ ಡೊನಾಲ್ಡ್ ಆಹಾರ ಮಳಿಗೆ ರೋಮನಲ್ಲಿ ಆರಂಭ ಆದಾಗ ಅದಕ್ಕೆ ಪೈಪೋಟಿಯಂತೆ ದೇಶಿಯ ಸಾಂಸ್ಕೃತಿಕ ಆಹಾರ ಪದ್ಧತಿಗಳಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಮತ್ತು ದೇಶಿಯ ಆಹಾರಗಳನ್ನು ಮತ್ತೊಮ್ಮೆ ಪರಿಚಯಿಸುವ ದೃಷ್ಟಿಯಿಂದ ರೋಮಿನಲ್ಲಿ ಆರಂಭ ಆಯಿತು ಇದನ್ನೇ ಕನ್ನಡೀಕರಣ ಮಾಡಿದಾಗ ಮಂದ ಗತಿಯ ಆಹಾರ ಚಲನೆ ಎಂಬುದಾಗಿ ಹೇಳಬಹುದು (ಚಾಲನೆಯೂ ಆಗಬಹುದು). ನಮ್ಮ ದೇಶದಲ್ಲಿ ಪ್ರತೀ ರಾಜ್ಯದಲ್ಲಿ ಹಲವಾರು ವಿಧದ ಆಹಾರ, ಭೋಜನ ಕ್ರಮ , ಭೋಜನದಲ್ಲಿ ಮಾಡುವ ವೈವಿಧ್ಯ ತಿನಿಸುಗಳು, ಆಹಾರ (ಬಡಿಸುವ) ಇಡುವ ಪದ್ಧತಿ ಕಾಣುವೆವು.

ಈಗ ದೂರದರ್ಶನದಲ್ಲಿ ಇರುವ ಹಲವು ಪ್ರಸಾರ ಕೇಂದ್ರಗಳು ತಮ್ಮ ಪ್ರಸರಣದಲ್ಲಿ ಆಹಾರ ತಯಾರಿಸುವ ಕ್ರಮ ಹೇಳಿಕೊಡುತ್ತಿರುವರು ಮತ್ತು ಬೇರೆ ಬೇರೆ ಸಂಸ್ಕೃತಿಯ ತಿನಿಸುಗಳನ್ನು ಪರಿಚಯಿಸುತ್ತಿರುವರು ಇದೆಲ್ಲ ಒಂದು ರೀತಿಯಲ್ಲಿ ಪೈಪೋಟಿ ಕೂಡ ಆಗಬಹುದು ಅಂದರೆ ವಿದೇಶೀಯ ಆಹಾರ ಪದ್ಧತಿಯ ಪರಿಚಯಕ್ಕೆ ಪೈಪೋಟಿ /ಮಾರ್ಪಾಡು ಮಾಡಿ ವಿದೇಶಿಯ ಆಹಾರಕ್ಕೆ ಭಾರತೀಯತೆ ಕೊಡುವುದು ಕೂಡ ಆಗಿರಬಹುದು.

ಇವೆಲ್ಲ ಮಂದ ಗತಿಯ ಪ್ರವಾಸದಲ್ಲಿ ಪೂರಕಗಳು ಆಗುವುವು.ನೀವೆಲ್ಲ ಯೌಟ್ಯೂಬಿನಲ್ಲಿ ಒಬ್ಬ ನಿಮ್ಮನ್ನು ಬೇರೆ ಬೇರೆ ಪ್ರದೇಶದ ಫಲಾಹಾರ ಮಂದಿರಕ್ಕೆ ಕರೆದೊಯ್ದು ಆಹಾರ ತಯಾರಿಸುವ ಕ್ರಮ ,ಯಾವ ರೀತಿಯ ಆಹಾರ ವಿವಿಧತೆ ಇದೆ ಮತ್ತು ಇದು ಯಾವಾಗ ಸ್ಥಾಪನೆ ಆಯಿತು ಮುಂತಾದ ವಿಷಯ ಪರಿಚಯಿಸುವರು .ಈಗ ಎಷ್ಟೋ ಮಂದಿ ಉದಾಹರಣೆಗೆ , ಚಂದ್ರು (ಸಿಹಿ ಕಹಿ ಚಂದ್ರು ) ಕೃಪಾಲು (ನಡೆಸುತ್ತಿರುವ ಫುಡ್ ಲವರ್ಸ್) ಮುಂತಾದವರು ಈ ಕೆಲಸ ಮಾಡುತ್ತಿರುವರು.

ಅದೇರೀತಿಯಲ್ಲಿ ಪ್ರವಾಸೀ ತಾಣಗಳ ಬಗ್ಗೆ ಹೊಸ ವಿಷಯಗಳನ್ನು ತಂದು ಕಲೆ ಹಾಕಿ ಪರಿಚಯಿಸುವ ಎಷ್ಟೋ ಕಾರ್ಯಕ್ರಗಳನ್ನು ನಾವು ಯೌಟ್ಯೂಬ್ ಮತ್ತು ದೂರದರ್ಶನದ ಮೂಲಕ ನೋಡುತ್ತಿರುವೆವು ಇವೆಲ್ಲ ಮಂದಗತಿಯ ಪ್ರವಾಸಕ್ಕೆ ಸೇರ್ಪಡೆ ಆಗುವುದು.ಇದನ್ನು ಯಾರು ಬೇಕಾದರೂ ಮಾಡಬಹುದಾಗಿದೆ.ಇದ್ದಲ್ಲೇ ಇದ್ದು ಕ್ಷೇತ್ರಜ್ಞ ಆಗುವುದು ಇದನ್ನೇ ಎಂದು ಜೆನ್ ಸನ್ಯಾಸಿ ಒಬ್ಬ ಹೇಳಿದ್ದರು.

ಪ್ರವಾಸೀ ತಾಣವಾಗಲೀ ಆಹಾರವಿಷಯ ಆಗಲಿ, ಉಡಿಗೆ ತೊಡಿಗೆ ಆಗಲೀ ,ಇಲ್ಲ ಸ್ಥಳೀಯ ಕಲಾವಿದರು ಮಾಡುವ ಕಲಾ ವಸ್ತುಗಳಿರಲೀ ಇವುಗಳ ಬುಡಕ್ಕೆ ಅಂದರೆ ಬೇರಿನ ಒಳ ಹೊಕ್ಕು ತಿಳಿಯಲು ಸಾಧ್ಯತೆಗಳು ಈಗಿನ ಬಿಕ್ಕಟ್ಟಿನ ಸ್ಥಿತಿ /ಪರಿಸರ ಒದಗಿಸಿದೆ.

ಈ ರೀತಿಯ ಪ್ರವಾಸ ಒತ್ತಡ ಮಾಡುವುದಿಲ್ಲ ,ಶಾರೀರಿಕ ಶ್ರಮ ಕೂಡ ಕಮ್ಮಿ ,ಮಾನಸಿಕ ಒತ್ತಡ ಇಲ್ಲ. ಹತ್ತಿರವೇ ಇರುವ ಎಷ್ಟೋ ವಿಷಯಗಳು, ತಾಣಗಳು ಇವುಗಳ ಬಗ್ಗೆ ನಿಧಾನಗತಿಯಲ್ಲಿ ಸಾಗಿ ತಿಳಿಯುವ ಸಮಯ ಒದಗಿದೆ.ಇದು ಎಷ್ಟೋ ಹಣ ತರಿಸುವ (ಆರ್ಥಿಕವಾಗಿ ) ಕೆಲಸವನ್ನ ಮಾಡಲು ಅನುವಾಗಿದೆ.ಹತ್ತಿರದ ಕಲಾವಿದರು, ಬಟ್ಟೆ ತಯಾರಿಸುವವರು, ತಯಾರಾದ ಆಹಾರ ಒದಗಿಸುವವರು, ಮತ್ತು ಸ್ಥಳೀಯ ಸಂಚಾರ ವ್ಯವಸ್ಥೆ ಕಲ್ಪಿಸುವವರಿಗೆ ಉದ್ಯೋಗ ಕಲ್ಪಿಸುವಲ್ಲಿ ಸಹಾಯಕ ಆಗಿದೆ.

ಆನ್ಲೈನ್ ತರಬೇತಿ, ಶಿಕ್ಷಣ, ಸಣ್ಣ ಕಥೆಗಳ ಪರಿಚಯ, ಸಣ್ಣ ಚಲನ ಚಿತ್ರ, ಸಂಸ್ಕೃತಿ ಪರಿಚಯಿಸುವ ಕಾರ್ಯಕ್ರಮ, ಪ್ರವಾಸೀ ತಾಣಗಳನ್ನು ವೀಡಿಯೋ ಮೂಲಕ ತೋರಿಸುವ ಕೆಲಸ, ಡಿಜಿಟಲ್ ಪುಸ್ತುಕಗಳ ಮಾರಾಟ, ಮುಂತಾದ ಕೆಲಸಕ್ಕೆ ಪ್ರೇರೇಪಣೆ ನೀಡಿದೆ. ಹಾಗೆಯೇ ಕುಶಲತೆ ಭೋದಿಸುವ ವೀಡಿಯೋಗಳು , ಹೆಚ್ಚು ಬೆಳಕಿಗೆ ಬಂದಿದೆ. ಕೋವಿಡ್ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಡಿಜಿಟಲ್ ಪುಸ್ತಕಗಳು ,ಡಿಜಿಟಲ್ ಚಲನ ಚಿತ್ರಗಳು, ಪುನರಾವರ್ತಿಸುವ ಹಳೆಯ ಸೀರಿಯಲ್ ಇವೆಲ್ಲ ಮಾರುಕಟ್ಟೆ ಸಂಪಾದಿಸಿವೆ. ಆನ್ಲೈನ್ ಶಾಪಿಂಗ್ ಜಾಸ್ತಿ ಖ್ಯಾತಿ ಹೊಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.