ಮಂಡ್ಯ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅತ್ತಿಗೆ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ನಾದಿನಿ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಕಂಬದಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಹೌದು, ಚೀಕನಹಳ್ಳಿ ಗ್ರಾಮದ ಪ್ರಿಯಾಂಕಳನ್ನು ಗಿರೀಶ್ ಜತೆ ಮದುವೆ ಮಾಡಲಾಗಿತ್ತು. ಆದರೆ ಅತ್ತಿಗೆ ಹಾಗೂ ನಾದಿನಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಪ್ರತಿನಿತ್ಯ ಜಗಳ, ಮನಸ್ತಾಪ ಇತ್ತು ಎನ್ನಲಾಗಿದ್ದು, ಶನಿವಾರ ಜಗಳ ತಾರಕಕ್ಕೆ ಏರಿದ್ದು, ಗಿರೀಶ್ ತಂಗಿ ಗೀತಾ ಅತ್ತಿಗೆ ಪ್ರಿಯಾಂಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ನಂತರ ಭಯದಿಂದ ನೇಣು ಬಿಗಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಇನ್ನು ಗ್ರಾಮದ ಗಿರೀಶ್ ಪತ್ನಿ ಅತ್ತಿಗೆ ಪ್ರಿಯಾಂಕ(35) ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ನಾದಿನಿ ಗೀತಾ(25) ಅತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳಾಗಿದ್ದು, ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ, ಎಎಸ್ಪಿ ಧನಂಜಯ, ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸರಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಬ್ ಇನ್ಸ್ಪೆಕ್ಟರ್ ಜಯಗೌರಿ ಸ್ಥಳದಲ್ಲಿ ಹಾಜರಿದ್ದು, ಪರಿಸ್ಥಿತಿ ಅವಲೋಕನ ನಡೆಸಿ ತನಿಖೆ ನಡೆಸುತ್ತಿದ್ದಾರೆ.