ಬೆಂಗಳೂರು: ಒಂದೆಡೆ ಆಪರೇಷನ್ ಕಮಲ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೈಕೋರ್ಟ್ ಇಂದು ತನಿಖೆಗೆ ಆದೇಶ ನೀಡಿದ್ದರೆ, ಮತ್ತೊಂದೆಡೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ವಿರುದ್ಧ ಸಿಡಿದೆದ್ದಿದ್ದು ಸಿಎಂಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.
ಹೌದು, ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಆಮಿಷವೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರೀತಂ ಗೌಡ, ಶಿವನಗೌಡ ನಾಯಕ್, ಮತ್ತು ಎಂ.ಬಿ. ಮರಮಕಲ್ ಅವರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಯಡಿಯೂರಪ್ಪ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಆಪರೇಷನ್ ಕಮಲ ನಡೆಸಿಯೇ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಈ ಆದೇಶ ಅಲ್ಪಮಟ್ಟದ ಪುಷ್ಠಿ ನೀಡಿದೆ.
ಇನ್ನು, ಕ್ಯಾಬಿನೆಟ್ ಸಚಿವರ ಖಾತೆಗಳಲ್ಲಿ ಸಚಿವರ ಅಧಿಕಾರ ಮೊಟಕುಗೊಳಿಸಿ ನೇರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಆರೋಪಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ, ರಾಜ್ಯಪಾಲರಿಗೆ ಪತ್ರ ಬರೆದು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.




