ಬಳ್ಳಾರಿ,ಮಾ.16: ಖಚಿತ ಮಾಹಿತಿ ಮೇರೆಗೆ ಕಂಪ್ಲಿ ತಾಲ್ಲೂಕಿನ ಕಂಪ್ಲಿ ಪಟ್ಟಣದ ಶಿಕಾರಿಹಟ್ಟಿಯ ನಾಗೇಶ್ ಮತ್ತು ಸುರೇಶ್ ಇವರ ಕಳ್ಳಭಟ್ಟಿ ತಯಾರಿಕ ಅಡಗಳಾದ ಸಣ್ಣಾಪುರ ರಸ್ತೆಯಲ್ಲಿರುವ ಸ್ಮಶಾನದ ಕಂಪೌಂಡ್ ಆವರಣ ಹಾಗೂ ಅವರ ಮನೆಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಕಳ್ಳಭಟ್ಟಿ ಸಾರಾಯಿ,ಬೆಲ್ಲದ ಕೊಳೆ ಇನ್ನೀತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.
ದಾಳಿ ಸಂದರ್ಭದಲ್ಲಿ ಅಕ್ರಮ ವಸ್ತುಗಳಾದ 460 ಲೀಟರ್ ಬೆಲ್ಲದ ಕೊಳೆ,65 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡು ಸದರಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು ವಶಪಡಿಸಿಕೊಂಡು ವಸ್ತುಗಳ ಅಂದಾಜು ಮೌಲ್ಯ ರೂ. 35 ಸಾವಿರಗಳಾಗಿದೆ.
ಅಬಕಾರಿ ಜಂಟಿ ಆಯುಕ್ತ ಎಲ್.ಮೋಹನ್‍ಕುಮಾರ್, ಅಬಕಾರಿ ಉಪ ಆಯುಕ್ತ ಪಿ.ಮಹೇಶ್ ಕುಮಾರ್ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕ ತುಕಾರಾಂನಾಯ್ಕ್, ಅಬಕಾರಿ ಉಪನಿರೀಕ್ಷಕರಾದ ಪಿ. ಗಿರೀಶ್, ಅಬಕಾರಿ ಸಿಬ್ಬಂದಿಗಳಾದ ಸಿ.ದಕ್ಷಿಣಾಮೂರ್ತಿ, ಮಹಮ್ಮದ್ ಹುಸೇನ್, ಹರೀಶಸಿಂಗ್ ಅವರೊಂದಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದೆ.