ನವದೆಹಲಿ : ನವದೆಹಲಿಯಲ್ಲಿ ಸಂಸತ್ ನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಿದ್ದು, ಇಂದು ಐತಿಹಾಸಿಕ ದಿನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೂ ಇದು ವಿಶೇಷ ದಿನ. ಈ ಕಟ್ಟಡ ದೇಶದ ಎಲ್ಲಾ ಜನರನ್ನೂ ಪ್ರತಿನಿಧಿಸುತ್ತದೆ. ಇದರ ನಿರ್ಮಾಣದಿಂದ ಎಲ್ಲಾ ಭಾರತೀಯರೂ ಹೆಮ್ಮೆ ಪಡುತ್ತಾರೆ. 2022ರಲ್ಲಿ 75ನೇ ಸ್ವಾತಂತ್ರೋತ್ಸವ ಹಿನ್ನೆಲೆ ಹೊಸ ಸಂಸತ್ ಭವನ ಉದ್ಘಾಟನೆ ಆಗಲಿದೆ. ಈ ಐತಿಹಾಸಿಕ ದಿನಕ್ಕೆ ದೇಶದ 130 ಕೋಟಿ ಜನ ಸಾಕ್ಷಿಯಾಗಿದ್ದಾರೆ ಎಂದರು.
ಸಂವಾದವೇ ಪ್ರಜಾಪ್ರಭುತ್ವದ ಆತ್ಮ: ಮೋದಿ
ಇನ್ನು ಹೊಸ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿಯಾಗಲು ಬರುವ ಕ್ಷೇತ್ರದ ಜನರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದಿದ್ದಾರೆ. ಭಾರತ ಪ್ರಜಾಪ್ರಭುತ್ವದ ತಾಯಿ. ಇಲ್ಲಿ ಪ್ರಜಾಪ್ರಭುತ್ವ ನಿತ್ಯ ನೂತನವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರುತ್ತದೆ. ಆದರೆ ಸಂಪರ್ಕ ಕಳೆದುಕೊಳ್ಳಬಾರದು. ಸಂವಾದವೇ ಪ್ರಜಾಪ್ರಭುತ್ವದ ಆತ್ಮ. ಸಂಸದರು ಜನರಿಗೆ ಉತ್ತರ ಕೊಡಲೇಬೇಕು. ದೇಶ ಮೊದಲು, ರಾಷ್ಟ್ರಹಿತಕ್ಕೆ ಮೊದಲ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2014ರಲ್ಲಿ ನಾನು ಸಂಸತ್ ಭವನಕ್ಕೆ ಪ್ರವೇಶಿಸುವಾಗ ಶಿರಬಾಗಿ, ನಮಸ್ಕರಿಸಿ ಒಳ ಪ್ರವೇಶಿಸಿದ್ದೆ. ಇದೇ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನಾ-ಮಂಥನ ನಡೆಸಿ ಸಂವಿಧಾನವನ್ನು ರಚಿಸಿದ್ದಾರೆ. ಸಂಸತ್ ಭವನ ಲೋಕತಂತ್ರದ ಆಧಾರ. ಸಂಸತ್ ಭವನ ನಿರ್ಮಾಣವಾಗಿ 100 ವರ್ಷ ಆಗುತ್ತಿದ್ದು, ವಿಶ್ರಾಂತಿ ಕೇಳುತ್ತಿದೆ. ಕೆಲ ವರ್ಷಗಳಿಂದ ಹೊಸ ಸಂಸತ್ ಭವನದ ಅಗತ್ಯತೆ ಇದೆ ಎಂಬ ಅನುಭವವಾಗುತ್ತಿತ್ತು. ಹೊಸ ಸಂಸತ್ ಭವನದಲ್ಲಿ ಹಲವು ನೂತನ ಸೌಲಭ್ಯಗಳಿರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಸಂಸತ್ ಭವನ ಬಸವಣ್ಣನವರ ಅನುಭವ ಮಂಟಪದ ಪ್ರತೀಕ: ಮೋದಿ
ಬಸವಣ್ಣ ಅವರ ಅನುಭವ ಮಂಟಪದ ಬಗ್ಗೆ ಕನ್ನಡದಲ್ಲೇ ಪ್ರಶಂಸೆ ವ್ಯಕ್ತಪಡಿಸಿದ ಅವರು, 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಪರಿಕಲ್ಪನೆ ಇತ್ತು. ಅಂದೇ ಅನುಭವ ಮಂಟಪ ಹೆಸರಿನ ಸಂಸತ್ತು ಅಸ್ತಿತ್ವದಲ್ಲಿತ್ತು. ಅದೇ ವಿಶ್ವದ ಮೊದಲ ಸಂಸತ್ತು. ಅನುಭವ ಮಂಟಪ ನಾಡಿನ ಅಭಿವೃದ್ಧಿ, ಉನ್ನತಿಗಾಗಿ ಕೆಲಸ ಮಾಡುತ್ತಿದೆ ಎಂದು ಬಸವಣ್ಣನವರೇ ಹೇಳಿದ್ದರು. ಅನುಭವ ಮಂಟಪ ಪ್ರಜಾಪ್ರಭುತ್ವದ ಪ್ರತಿರೂಪವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ