ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ತನ್ನ ಬಂಧುಗಳನ್ನು ಕಂಡು ಅರ್ಜುನನು ಅನುಭವಿಸಿದ ಮಾನಸಿಕ ಸಂಘರ್ಷವೇನು? ಭಗವದ್ಗೀತೆಯ ಮೊದಲ ಅಧ್ಯಾಯದ 22 ರಿಂದ 29ನೇ ಶ್ಲೋಕಗಳ ಭಾವಾರ್ಥ ಇಲ್ಲಿದೆ.
ಕುರುಕ್ಷೇತ್ರದ ರಣಾಂಗಣದಲ್ಲಿ ಸೈನ್ಯಗಳ ಮಧ್ಯೆ ಅರ್ಜುನನ ದ್ವಂದ್ವ ಮತ್ತು ವಿಷಾದದ ಶ್ಲೋಕಗಳು (22-29)
ಯಾವದೇತಾನ್ ನಿರೀಕ್ಷೇsಹಂ ಯೋದ್ದುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ||
ಯುದ್ಧ ಮಾಡುವ ಹಂಬಲದಿಂದ ಇಲ್ಲಿ ನೆರೆದಿರುವವರನ್ನು ನಾನು ನೋಡಲು ಬಯಸುತ್ತೇನೆ. ಈ ಭೀಕರ ಯುದ್ಧದಲ್ಲಿ ನಾನು ಯಾರ ಜೊತೆ ಹೋರಾಡಬೇಕೆಂದು ತಿಳಿಯಲು ಕೃಷ್ಣನು ರಥವನ್ನು ಮಧ್ಯದಲ್ಲಿ ನಿಲ್ಲಿಸಿದನು.
ಯೋತ್ಸ್ಯಮಾನಾನವೇಕ್ಷೇಹಂ ಯ ಏತೇತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ||
ದುಷ್ಟ ಬುದ್ಧಿಯ ದುರ್ಯೋಧನನ ಹಿತವನ್ನು ಬಯಸಿ ಯುದ್ಧದಲ್ಲಿ ಆತನಿಗೆ ಬೆಂಬಲ ನೀಡಲು ಇಲ್ಲಿ ನೆರೆದಿರುವವರನ್ನು ನಾನೊಮ್ಮೆ ನೋಡುತ್ತೇನೆ ಎಂದು ಅರ್ಜುನನು ಹೇಳುತ್ತಾನೆ.
ಸಂಜಯ ಉವಾಚ: ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ ।
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ||
ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ ।
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ||
ಸಂಜಯನು ಹೇಳಿದನು: ಓ ಭರತ ವಂಶದ ದೊರೆಯೇ, ಅರ್ಜುನನ ಮಾತಿನಂತೆ ಕೃಷ್ಣನು (ಹೃಷೀಕೇಶ) ಎರಡು ಸೈನ್ಯಗಳ ಮಧ್ಯೆ ಭೀಷ್ಮ ಮತ್ತು ದ್ರೋಣರ ಎದುರಿಗೆ ಶ್ರೇಷ್ಠ ರಥವನ್ನು ನಿಲ್ಲಿಸಿದನು. ನಂತರ ಅರ್ಜುನನಿಗೆ “ಪಾರ್ಥ, ಇಲ್ಲಿ ನೆರೆದಿರುವ ಕುರು ವಂಶದವರನ್ನು ನೋಡು” ಎಂದನು.
ತತ್ರಾಪಶ್ಯತ್ ಸ್ಥಿತಾನ್ ಪಾರ್ಥಃ ಪಿತೃನಥ ಪಿತಾಮಹಾನ್ ।
ಆಚಾರ್ಯಾನ್ ಮಾತುಲಾನ್ ಭ್ರಾತೄನ್ ಪುತ್ರಾನ್ ಪೌತ್ರಾನ್ ಸಖೀನ್ ತಥಾ ||
ಅಲ್ಲಿ ಎರಡೂ ಕಡೆಯ ಸೈನ್ಯಗಳಲ್ಲಿ ಅರ್ಜುನನು ತನ್ನ ತಂದೆಯ ಸಮಾನರಾದವರನ್ನು, ಅಜ್ಜಂದಿರನ್ನು, ಗುರುಗಳನ್ನು, ಸೋದರಮಾವಂದಿರನ್ನು, ಅಣ್ಣ-ತಮ್ಮಂದಿರನ್ನು, ಮಕ್ಕಳನ್ನು ಮತ್ತು ಗೆಳೆಯರನ್ನು ಕಂಡನು.
ತಾನ್ ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ ಬಂಧೂನವಸ್ಥಿತಾನ್ ।
ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ ||
ಸೇರಿದ್ದ ಎಲ್ಲಾ ಬಂಧುಗಳನ್ನು ಕಂಡ ಕುಂತಿ ಪುತ್ರ ಅರ್ಜುನನು ಕಡು ಕರುಣೆಗೊಳಗಾಗಿ, ಮನಸ್ಸಿನಲ್ಲಿ ಅತೀವ ಶೋಕದಿಂದ ಭಾವಪರವಶನಾಗಿ ಹೀಗೆ ಹೇಳಿದನು.
ಅರ್ಜುನ ಉವಾಚ:
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ।
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ||
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ।
ಅರ್ಜುನನು ಹೇಳಿದನು: ಕೃಷ್ಣಾ, ಯುದ್ಧಕ್ಕಾಗಿ ಇಲ್ಲಿ ನೆರೆದಿರುವ ನಮ್ಮದೇ ಬಂಧುಗಳನ್ನು ಕಂಡು ನನ್ನ ಅಂಗಾಂಗಗಳು ಕಂಗೆಡುತ್ತಿವೆ, ಬಾಯಿ ಬತ್ತುತ್ತಿದೆ. ಇಡೀ ಶರೀರ ನಡುಗುತ್ತಿದೆ ಮತ್ತು ಮೈ ನವಿರೇಳುತ್ತಿದೆ.




