Bird flu h5n1 : ನೆರೆ ರಾಜ್ಯಗಳಾದ ಮಹಾರಾಷ್ಟ್ರ& ತಮಿಳುನಾಡುಗಳಲ್ಲಿ ಹಕ್ಕಿ ಜ್ವರ (H5N1) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಕರ್ನಾಟಕದಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಮಿಳುನಾಡಿನಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಹಕ್ಕಿ ಜ್ವರಕ್ಕೆ ಬಲಿಯಾದರೆ, ಮಹಾರಾಷ್ಟ್ರದಲ್ಲೂ ವೈರಸ್ ಸಕ್ರಿಯವಾಗಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಹಕ್ಕಿ ಜ್ವರ ಹರಡುವುದನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ, ಆದರೆ ಎಚ್ಚರ ತಪ್ಪಬಾರದು ಎ೦ದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಹಕ್ಕಿ ಜ್ವರ?
ಹಕ್ಕಿ ಜ್ವರವು H5N1 ವೈರಸ್ನಿಂದ ಉ೦ಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಮುಖ್ಯವಾಗಿ ಪಕ್ಷಿಗಳಲ್ಲಿ ಹರಡುತ್ತದೆ. ಆದರೆ ಸೋಂಕಿತ ಪಕ್ಷಿಗಳ ನೇರ ಸಂಪರ್ಕ, ಅವುಗಳ ಲಾಲಾರಸ ಅಥವಾ ಮೂಗು- ಬಾಯಿಯ ಸ್ರವಿಸುವಿಕೆಯಿ೦ದ ಮನುಷ್ಯರಿಗೂ ಈ ವೈರಸ್ ಹರಡುವ ಸಾಧ್ಯತೆ ಇದೆ. ಸೋಂಕಿತ ಹಕ್ಕಿಯೊಂದಿಗೆ ಸಂಪರ್ಕಕ್ಕೆ ಬ೦ದ 4 ರಿಂದ 6 ದಿನಗಳೊಳಗೆ ಮಾನವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎ೦ದು ವೈದ್ಯರು ಮಾಹಿತಿ ನೀಡಿದ್ದಾರೆ.
ಹಕ್ಕಿಜ್ವರದ ಲಕ್ಷಣಗಳು
- ತೀವ್ರ ಜ್ವರ
- ಕೆಮ್ಮು ಮತ್ತು ಗಂಟಲು ನೋವು
- ಉಸಿರಾಟದಲ್ಲಿ ತೊ೦ದರೆ
- ಕಣ್ಣು ಕೆಂಪಾಗುವುದು, ಕಿರಿಕಿರಿ
- ಸ್ನಾಯು ಹಾಗೂ ದೇಹ ನೋವು
- ತಲೆನೋವು ಮತ್ತು ತೀವ್ರ ಆಯಾಸ
- ನ್ಯೂಮೋನಿಯಾ (ಗಂಭೀರ ಸ್ಥಿತಿಯಲ್ಲಿ)
ಯಾರಿಗೆ ಹೆಚ್ಚು ಅಪಾಯ
ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಅವರ ಪ್ರಕಾರ, ಪೌಲ್ಟಿಫಾರ್ಮ್ಗಳಲ್ಲಿ ಕೆಲಸ ಮಾಡುವವರು, ವೆಟರ್ನರಿ ಸಿಬ್ಬಂದಿ ಹಾಗೂ ಪಕ್ಷಿಗಳ ನೇರ ಸಂಪರ್ಕದಲ್ಲಿರುವವರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹಕ್ಕಿ ಜ್ವರಕ್ಕೆ ತುತ್ತಾದವರಲ್ಲಿ ಸಾವಿನ ಪ್ರಮಾಣ ಶೇ.50ರಷ್ಟಿದೆ ಎ೦ಬುದು ಆತ೦ಕಕಾರಿ ಸಂಗತಿ. ಸೋಂಕು ನಿಯಂತ್ರಣ ತಪ್ಪಿದರೆ ಇದು ಸಾಂಕ್ರಾಮಿಕ ಸ್ವರೂಪ ಪಡೆಯುವ ಸಾಧ್ಯತೆಯೂ ಇದೆ.
ಈ ವಿಷಯಗಳಲ್ಲಿ ಎಚ್ಚರ ಅಗತ್ಯ
ಅರೆಬೆಂದ ಅಥವಾ ಸೆಮಿ ಬಾಯ್ಸ್ ಮಾಂಸಾಹಾರ ಸೇವನೆ ತಪ್ಪಿಸಬೇಕು. ಚೆನ್ನಾಗಿ ಬೇಯಿಸಿದ ಆಹಾರ ಮಾತ್ರ ಸೇವಿಸಬೇಕು. ಹ್ಯಾಂಡ್ ಹೈಜಿನ್ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಪಕ್ಷಿಗಳ ಅಸಾಮಾನ್ಯ ಸಾವು ಕ೦ಡುಬ೦ದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ಕ೦ಡುಬ೦ದಲ್ಲಿ ನಿರ್ಲಕ್ಷ್ಯ ವಹಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.




