Menstrual leave | ರಾಜ್ಯ ಸರ್ಕಾರವು ಮಹಿಳಾ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಋತುಚಕ್ರ ರಜೆ ನೀಡಲು ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.
ಹೌದು, ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಎಲ್ಲಾ ಮಹಿಳಾ ನೌಕರರಿಗೂ ಅನ್ವಯ ಆಗುವಂತೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳ ಅಡಿಯಲ್ಲಿ ನೋಂದಣಿಯಾಗಿರುವ ಸರ್ಕಾರಿ, ಅನುದಾನಿತ, ಖಾಸಗಿ ಎಲ್ಲಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಸೌಲಭ್ಯ ನೀಡಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಅದರಂತೆ, ತಿಂಗಳಲ್ಲಿ ಒಂದು ದಿನ ವರ್ಷಕ್ಕೆ 12 ದಿನ ವೇತನ ಸಹಿತ ರಜೆ ನೀಡುವಂತೆ ಸರ್ಕಾರ ಆದೇಶಿಸಿದೆ. ಜೊತೆಗೆ 2 ಷರತ್ತುಗಳನ್ನ ವಿಧಿಸಿ ರಜೆ ನೀಡಲು ಸಂಸ್ಥೆಗಳಿಗೆ ಸೂಚಿಸಿದೆ. ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.




