Danta Bhagya Yojana : ಕರ್ನಾಟಕ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ದಂತ ಭಾಗ್ಯ ಯೋಜನೆ ಅಥವಾ ದಂದಪಂಕ್ತಿ ಯೋಜನೆಯೂ ಒಂದು. ಇದನ್ನು ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ಹಿರಿಯ ನಾಗರಿಕರಿಗೆ ಉಚಿತವಾಗಿ ಮತ್ತು ಭಾಗಶಃ ದಂತಪಂಕ್ತಿಗಳನ್ನು ಒದಗಿಸಲು 2014 ರಲ್ಲಿ ಪ್ರಾರಂಭಿಸಿತು. ಈ ಯೋಜನೆಯು ಬಡವರಿಗೆ ದುಬಾರಿಯಾಗಿರುವ ದಂತ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಗುರಿ ಹೊಂದಿದೆ. ಸರ್ಕಾರಿ ಮತ್ತು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲಾಗಿದೆ.
ದಂತ ಭಾಗ್ಯ ಯೋಜನೆ: ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ ಆರ್ಥಿಕ ನೆರವನ್ನು ಹೆಚ್ಚಿಸಿದ ಸರ್ಕಾರ
ಸಂಪೂರ್ಣ ದಂತ ಪಂಕ್ತಿ ಅಥವಾ ಹೆಚ್ಚಿನ ಹಲ್ಲುಗಳನ್ನು ಕಳೆದುಕೊಂಡಿರುವ 45 ವರ್ಷಕ್ಕೆ ಮೇಲ್ಪಟ್ಟ ಬಿಪಿಎಲ್ ವರ್ಗಕ್ಕೆ ಸೇರಿದ ನಾಗರಿಕರಿಗೆ ಉಚಿತವಾಗಿ ಕೃತಕ ದಂತ ಪಂಕ್ತಿ ನೀಡುವ ಯೋಜನೆ ಇದಾಗಿದೆ. ಈ ಹಿಂದೆ ಸಂಪೂರ್ಣ ದಂತಪಂಕ್ತಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು 2,000 ರೂ. ದಿಂದ 3,000 ರೂ.ಗೆ ಹೆಚ್ಚಿಸಲಾಗಿದೆ. ಭಾಗಶಃ ದಂತಪಂಕ್ತಿಗೆ ನೀಡಲಾಗುತ್ತಿದ್ದ 1,000 ರೂ. ಆರ್ಥಿಕ ನೆರವನ್ನು ಮುಂದುವರಿಸಲಾಗಿದೆ. ದಂತಪಂಕ್ತಿ ತಯಾರಿಕೆಗೆ ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ ಈ ಬದಲಾವಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ದಂತ ಭಾಗ್ಯ ಯೋಜನೆಗೆ ಯಾರೆಲ್ಲಾ ಅರ್ಹರು?
ಕರ್ನಾಟಕ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಜಾರಿಗೆ ತಂದಿರುವ ದಂತ ಭಾಗ್ಯ ಯೋಜನೆಯಿಂದ ಹೆಚ್ಚಿನ ಸಂಖ್ಯೆಯ ಜನರು ಲಾಭ ಪಡೆಯಲು ಅರ್ಹರಾಗಿದ್ದಾರೆ. ಯೋಜನೆಯಡಿ ದಂತಪಂಕ್ತಿ ಪಡೆಯಲು ಈ ಹಿಂದೆ ನಿಗದಿಪಡಿಸಿದ್ದ ವಯಸ್ಸಿನ ಮಿತಿ 60 ವರ್ಷವಾಗಿತ್ತು. ಈಗ ಈ ಮಿತಿಯನ್ನು 45 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಕೂಡ ಉಚಿತ ದಂತಪಂಕ್ತಿಗಳನ್ನು ಪಡೆಯಬಹುದು.
ಸರ್ಕಾರದ ಮಹತ್ವದ ದಂತ ಭಾಗ್ಯ ಯೋಜನೆಯ ಪ್ರಮುಖ ಲಕ್ಷಣಗಳು ಹೀಗಿವೆ
ದಂತ ಭಾಗ್ಯ ಯೋಜನೆಯ ಅರ್ಹತಾ ವಯಸ್ಸನ್ನು 60 ವರ್ಷದಿಂದ 45 ವರ್ಷಕ್ಕೆ ಇಳಿಸಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಬಡ ನಾಗರಿಕರಿಗೆ ಯೋಜನೆಯ ಲಾಭ ಪಡೆಯಲು ಅವಕಾಶ ಸಿಗಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ, ಈ ಯೋಜನೆ ರಾಜ್ಯದಾದ್ಯಂತ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಮೂಲಕ ತನ್ನ ಸೇವೆಗಳನ್ನು ವಿಸ್ತರಿಸಿದೆ. ಆಶಾ ಕಾರ್ಯಕರ್ತರು ಅಗತ್ಯವಿರುವ ಹಿರಿಯ ನಾಗರಿಕರನ್ನು ಗುರುತಿಸಿ ದಂತ ವೈದ್ಯಕೀಯ ಕಾಲೇಜುಗಳಿಗೆ ಉಲ್ಲೇಖಿಸಲು ಸಹಾಯ ಮಾಡುತ್ತಾರೆ.
ದಂತ ಭಾಗ್ಯ ಯೋಜನೆಯಡಿ ಸಹಾಯ ಪಡೆಯುವುದು ಹೇಗೆ?
ದಂತ ಭಾಗ್ಯ ಯೋಜನೆಯು ಬಡವರಿಗೆ ಉಚಿತವಾಗಿ ದಂತ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಅರ್ಹ ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರು ಹತ್ತಿರದ ಸರ್ಕಾರಿ ಅಥವಾ ಖಾಸಗಿ ದಂತ ವೈದ್ಯಕೀಯ ಕಾಲೇಜು ಅಥವಾ ಆಸ್ಪತ್ರೆಗಳನ್ನು ಸಂಪರ್ಕಿಸಿ ಯೋಜನೆಯಡಿ ಉಚಿತ ದಂತಪಂಕ್ತಿಗಳನ್ನು ಪಡೆಯಬಹುದು. ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸ್ಥಳೀಯ ಆರೋಗ್ಯ ಕಾರ್ಯಕರ್ತರನ್ನು ಸಹ ಸಂಪರ್ಕಿಸಬಹುದು. ದಂತಪಂಕ್ತಿಗಳನ್ನು ನೀಡುವುದರ ಜೊತೆಗೆ, ಬಾಯಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಸಹ ಯೋಜನೆ ಸಹಕಾರಿಯಾಗಿದೆ.




