ವಿಜಯಪ್ರಭ ವಿಶೇಷ, ಹರಪನಹಳ್ಳಿ: ಸದಾ ಆಳುವ ಸರ್ಕಾರಗಳ ನಿರ್ಲಕ್ಷ್ಯ ಒಳಗಾಗುತ್ತಿರುವ ಹರಪನಹಳ್ಳಿ ತಾಲೂಕಿಗೆ ಈಗ ಮತ್ತೆ ಸಂಕಷ್ಟ ಆವರಿಸುವ ಲಕ್ಷಣಗಳು ಗೋಚರಿಸುತ್ತಿವೆ.
ಹೈಕ ಸೌಲಭ್ಯದ ಕಾರಣಕ್ಕೆ ದಾವಣಗೆರೆಯಿಂದ ಪುನಃ ಬಳ್ಳಾರಿಗೆ ಸೇರಿದ್ದ ಹರಪನಹಳ್ಳಿ ತಾಲೂಕು ಅಕ್ಷರಶಃ ಹರಿದು ಹಂಚಿ ಹೋಗಿದೆ. ಈಗ ವಿಜಯನಗರ ಜಿಲ್ಲೆ ಘೋಷಣೆ ಕುರಿತು ಸರ್ಕಾರ ಒಲವು ತೋರಿದ್ದು, ತಾಲೂಕಿನ ಜನರಿಗೆ ಮತ್ತೆ ಸೌಲಭ್ಯ ಕೈತಪ್ಪುವ ಆತಂಕ ಎದುರಾಗಿದೆ.
ಹರಪನಹಳ್ಳಿ ಕ್ಷೇತ್ರಕ್ಕೆ ಅನ್ಯಾಯವಾಗುವ ಲಕ್ಷಣಗಳು ಕಾಣಿಸುತ್ತಿದ್ದರೂ ಸ್ಥಳೀಯ ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಮಾತ್ರ ಗಟ್ಟಿ ನಿಲುವು ತಾಳಿ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡುತ್ತಿಲ್ಲ ಎಂದು ಸ್ಥಳೀಯ ಮುಖಂಡರು ಆರೋಪಿಸಿದ್ದಾರೆ. ಶಾಸಕರು ಕೇವಲ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಹರಪನಹಳ್ಳಿ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಧುಮುಖಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯನಗರ ಜಿಲ್ಲೆ ಘೋಷಣೆ; ಹರಪನಹಳ್ಳಿಗೆ ಕೈ ತಪ್ಪುತ್ತಾ ಹೈಕ ಸೌಲಭ್ಯ ?
ಸದಾ ಬರವನ್ನೇ ಅನುಭವಿಸುತ್ತಿರುವ ಹರಪನಹಳ್ಳಿ ತಾಲೂಕು ಎಂ.ಪಿ.ಪ್ರಕಾಶ್ ಸೇರಿ ಹಲವು ರಾಜಕಾರಣಿಗಳಿಗೆ, ಹೋರಾಟಗಾರರಿಗೆ ನೆಲೆ ನೀಡಿತ್ತು. ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ದಾವಣಗೆರೆ ಜಿಲ್ಲೆ ರಚನೆ ನಂತರ ದಾವಣಗೆರೆ ಸೇರ್ಪಡೆಯಾಯಿತು. ತಾಲೂಕಿನ ಬಗೆಗೆ ಸರ್ಕಾರಗಳ ನಿರ್ಲಕ್ಷ್ಯ ಮುಂದುವರಿತು.
ಹಿಂದುಳಿದ ಜಿಲ್ಲೆಗಳಿಗೆ ಹೈಕ ಸೌಲಭ್ಯ ಘೋಷಣೆಯ ನಂತರ ನಮ್ಮನ್ನು ಮೂಲ ಜಿಲ್ಲೆ ಬಳ್ಳಾರಿಗೆ ಸೇರಿಸಿಯಾದರೂ ಸರಿ ನಮಗೆ ಹೈಕ ಸೌಲಭ್ಯ ನೀಡಬೇಕು ಎಂದು ಸ್ಥಳೀಯರು ಹೋರಾಟ ಶುರು ಮಾಡಿದರು. ಸತತ ಪ್ರಯತ್ನದ ಫಲವಾಗಿ ಆಗಿನ ಶಾಸಕ ಎಂ.ಪಿ.ರವೀಂದ್ರ ಅವರ ಒತ್ತಡದಿಂದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಹರಪನಹಳ್ಳಿಯನ್ನು ಪುನಃ ಬಳ್ಳಾರಿಗೆ ಸೇರಿಸಿ ಹೈಕ ಸೌಲಭ್ಯ ನೀಡಲಾಯಿತು.
ಈಗ ವಿಜಯನಗರ ಜಿಲ್ಲೆ ಘೋಷಣೆ ಸರ್ಕಾರ ನಿರ್ಧರಿಸಿದ್ದು, ಹರಪನಹಳ್ಳಿ ತಾಲೂಕಿನ ಜನರಿಗೆ ಸೌಲಭ್ಯ ತಪ್ಪುವ ಆತಂಕ ಕಾಡುತ್ತಿದೆ. ವಿಜಯನಗರ ಜಿಲ್ಲೆ ರಚನೆ ನಂತರ ಹರಪನಹಳ್ಳಿ ತಾಲೂಕು ವಿಜಯನಗರಕ್ಕೆ ಸೇರುತ್ತದೆ. ಆಗ ತಾಲೂಕಿನ ಜನ ಹೈಕ ಸೌಲಭ್ಯದಿಂದ ವಂಚಿತವಾಗಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಿಲ್ಲೆಯಾಗಲು ಅರ್ಹ ಹರಪನಹಳ್ಳಿ
ದಾವಣಗೆರೆ ಹಾಗೂ ಬಳ್ಳಾರಿ ನಡುವೆ ಹರಿದು ಹಂಚಿ ಹೋಗಿರುವ ಹರಪನಹಳ್ಳಿ ತಾಲೂಕು ಜಿಲ್ಲೆಯಾಗಲು ಭೌಗೋಳಿಕವಾಗಿ ಅರ್ಹವಾಗಿದೆ. ಆದ್ದರಿಂದ ಸ್ಥಳೀಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆ ರಚನೆಗೆ ಮುಂದಾಗಬೇಕು. ಕೇವಲ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಇದಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು.