Children mobile phone use: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಮೊಬೈಲ್ ಅಡಿಕ್ಷನ್ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್ನಿಂದ 5 ಸಾವಿರ ಮಕ್ಕಳಿಗೆ ಕಣ್ಣಿನ ದೋಷ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃಷ್ಟಿದೋಷ ಪ್ರಕರಣಗಳು ಹೆಚ್ಚಾಗುತ್ತಿವೆ.
ಶಾಲೆಗಳಲ್ಲಿ ಮಕ್ಕಳ ನೇತ್ರ ತಪಾಸಣೆ ವೇಳೆ ಈ ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದ್ದು, ಅತಿಯಾದ ಮೊಬೈಲ್ ಬಳಕೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಈ ಮಕ್ಕಳ ನೇತ್ರ ತಪಾಸಣೆ ವೇಳೆ 4,398 ಸರ್ಕಾರಿ ಹಾಗೂ 660 ಅನುದಾನಿತ ಶಾಲಾ ಮಕ್ಕಳಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ.
ರಾಜ್ಯದಲ್ಲಿ 99% ಮಕ್ಕಳಲ್ಲಿ ಮೊಬೈಲ್ ಗೀಳು
ಕರ್ನಾಟಕದಲ್ಲಿ 15ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ. 99ರಷ್ಟು ಹುಡುಗರು ಮತ್ತು ಶೇ.100ರಷ್ಟು ಹುಡುಗಿಯರು ಮೊಬೈಲ್ ಬಳಕೆ ಅಥವಾ ಗೀಳಿಗೆ ತುತ್ತಾಗಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಹೆಚ್ಚುತ್ತಿರುವ ಆನ್ಲೈನ್ ಮತ್ತು ಮೊಬೈಲ್ ಬಳಕೆ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದರಿಂದ ಮಕ್ಕಳು ಹೆಚ್ಚಾಗಿ ಆನ್ಲೈನ್ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಿದ್ಧಪಡಿಸಿರುವ ವರದಿಯಲ್ಲಿ ಈ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಫೋನ್ ಬಳಕೆಯಿಂದ ಮಕ್ಕಳಲ್ಲಿ ಮಯೋಪಿಯಾ ಡಿಸೀಜ್ ಪತ್ತೆ!
ಮಕ್ಕಳ ಮೊಬೈಲ್ ಸ್ಕ್ರೀನಿಂಗ್ ಟೈಮ್ ಏರಿಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಜ್ ಶುರುವಾಗಿದ್ದು ವೈದ್ಯರು ಅಚ್ಚರಿಯ ಮಾಹಿತಿ ಹೊರ ಹಾಕಿದ್ದಾರೆ. ಹೌದು ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗೆ ಮಯೋಪಿಯಾ ಡಿಸೀಸ್ ಶುರುವಾಗಿದೆ. ಮಯೋಪಿಯಾ ಡಿಸೀಸ್ ಏರಿಕೆಗೆ ವೈದ್ಯರೇ ಶಾಕ್ ಆಗಿದ್ದು ಬೆಂಗಳೂರಿನ ಖ್ಯಾತ ನೇತ್ರ ತಜ್ಞರ ಸಂಶೋಧನೆಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ. ಈ ರೋಗದಿಂದ ಮುಂದಿನ ದಿನಗಳಲ್ಲಿ ಶೇ 50 ರಿಂದ 60 ರಷ್ಟು ಮಕ್ಕಳಿಗೆ ದೃಷ್ಟಿ ದೋಷ ಸಮಸ್ಯೆ ಕಾಡಲಿದೆಯಂತೆ.
ಅತಿಯಾದ ಮೊಬೈಲ್ ಸ್ಕ್ರೀನ್ ವೀಕ್ಷಣೆಯಿಂದ ಮೆದುಳಿಗೆ ಹಾನಿ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ಗಳಂತಹ ಸಾಧನಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇದೇ ಮೊಬೈಲ್ ನಮ್ಮ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಮೊಬೈಲ್ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದ್ದು, ಹೆಚ್ಚು ಹೆಚ್ಚು ಸ್ಕ್ರೀನ್ ಬಳಸುವುದರಿಂದ ವೈಟ್ ಮ್ಯಾಟರ್ ಟ್ರ್ಯಾಕ್ಗಳಲ್ಲಿನ ಬದಲಾವಣೆಗಳು ಕಂಡುಬರುತ್ತವೆ. ಇದು ಮೆದುಳಿನ ಪ್ರದೇಶಗಳ ನಡುವಿನ ಸಂವಹನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.




