ಮಹಾಕುಂಭ ನಗರ: ಮಹಾ ಕುಂಭದ ಆಧ್ಯಾತ್ಮಿಕ ವೈಭವದಿಂದ ಆಕರ್ಷಿತರಾದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 68 ಹಿಂದೂ ಭಕ್ತರ ಗುಂಪು ಗುರುವಾರ ಪ್ರಯಾಗ್ರಾಜ್ಗೆ ಆಗಮಿಸಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ತಮ್ಮ ಪೂರ್ವಜರ ಆತ್ಮದ ಶಾಂತಿಗಾಗಿ ಪ್ರಾರ್ಥಿಸಿತು. ಉತ್ತರ ಪ್ರದೇಶದ ಮಾಹಿತಿ ಇಲಾಖೆಯ ಪ್ರಕಾರ, ಭಕ್ತರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿಯ ಪವಿತ್ರ ಸಂಗಮದಲ್ಲಿ ತಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಿದರು.
ತಂಡದೊಂದಿಗೆ ಆಗಮಿಸಿದ ಮಹಂತ್ ರಾಮನಾಥ್ ಅವರು ಮೊದಲು ಹರಿದ್ವಾರಕ್ಕೆ ಭೇಟಿ ನೀಡಿ, ಅಲ್ಲಿ ಅವರು ಸುಮಾರು 480 ಪೂರ್ವಜರ ಚಿತಾಭಸ್ಮವನ್ನು ವಿಸರ್ಜಿಸಿದರು ಮತ್ತು ಮಹಾಕುಂಭಕ್ಕೆ ಬರುವ ಮೊದಲು ಆಚರಣೆಗಳನ್ನು ಮಾಡಿದರು ಎಂದು ಹೇಳಿದರು.
ಸೆಕ್ಟರ್ 9ರ ಶ್ರೀ ಗುರು ಕರ್ಶ್ನಿ ಶಿಬಿರದಲ್ಲಿ ಮಾತನಾಡಿದ ಸಿಂಧ್ ನಿವಾಸಿ ಗೋವಿಂದ್ ರಾಮ್ ಮಖೇಜಾ, “ಕಳೆದ ಎರಡು ಅಥವಾ ಮೂರು ತಿಂಗಳುಗಳಲ್ಲಿ ನಾವು ಮಹಾಕುಂಭದ ಬಗ್ಗೆ ಕೇಳಿದಾಗಿನಿಂದ, ನಾವು ಭೇಟಿ ನೀಡಲು ಹಾತೊರೆಯುತ್ತಿದ್ದೆವು. ನಾವು ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
“ಕಳೆದ ಏಪ್ರಿಲ್ನಲ್ಲಿ, ಪಾಕಿಸ್ತಾನದಿಂದ 250 ಜನರು ಪ್ರಯಾಗ್ ರಾಜ್ಗೆ ಭೇಟಿ ನೀಡಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಈ ಬಾರಿ ಸಿಂಧ್ ಪ್ರಾಂತ್ಯದ ಘೋಟ್ಕಿ, ಸುಕ್ಕೂರ್, ಖೈರ್ಪುರ, ಶಿಕರ್ಪುರ, ಕಾರ್ಕೋಟ್ ಮತ್ತು ಜಟಾಬಲ್ ಜಿಲ್ಲೆಗಳಿಂದ 68 ಮಂದಿ ಆಗಮಿಸಿದ್ದು, ಇದರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ 50 ಮಂದಿ ಸೇರಿದ್ದಾರೆ.