ಕೇಂದ್ರದ ನೆರವು ಕೇಳುವ ಧೈರ್ಯ ಮುಖ್ಯಮಂತ್ರಿಗೆ ಇಲ್ಲದಿದ್ದರೆ; ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲಿ: ಸಿದ್ದರಾಮಯ್ಯ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರು, ಉತ್ತರ ಕರ್ನಾಟಕದ ನೆರೆಪರಿಸ್ಥಿತಿಗೆ ಕೇಂದ್ರದ ನೆರವು ಕೇಳುವ ಧೈರ್ಯ ಮುಖ್ಯಮಂತ್ರಿಯವರಿಗೆ ಇರದೆ ಇದ್ದರೆ ಸರ್ವಪಕ್ಷಗಳ…

Siddaramaih vijayaprabha

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು, ಉತ್ತರ ಕರ್ನಾಟಕದ ನೆರೆಪರಿಸ್ಥಿತಿಗೆ ಕೇಂದ್ರದ ನೆರವು ಕೇಳುವ ಧೈರ್ಯ ಮುಖ್ಯಮಂತ್ರಿಯವರಿಗೆ ಇರದೆ ಇದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿ. ನಾವು ರಾಜ್ಯದ ಸ್ಥಿತಿಯನ್ನು ವಿವರಿಸಿ ಹಣ ಬಿಡುಗಡೆ ಮಾಡುವಂತೆ ಒತ್ತಡ ಹಾಕುತ್ತೇವೆ.

ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿರುವ ಪರಿಸ್ಥಿತಿಯನ್ನು ಚರ್ಚಿಸಲು ತಕ್ಷಣ ವಿಧಾನ ಮಂಡಲದ ಅಧಿವೇಶನ ಕರೆಯಬೇಕು, ನಮ್ಮ ಎಲ್ಲ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿರುವ ಹಾನಿಯನ್ನು ಹೇಳಿಕೊಳ್ಳಲು ಅವಕಾಶ ನೀಡಬೇಕು.

Vijayaprabha Mobile App free

ಅಕ್ಟೋಬರ್ 19 ಮತ್ತು 20ರಂದು ಬಾದಾಮಿ ಹಾಗೂ 25 ಮತ್ತು 26ರಂದು ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದೇನೆ, ಸಂತ್ರಸ್ತರ ಕಷ್ಟಗಳನ್ನು ಕೇಳಿದ್ದೇನೆ. ಅಲ್ಲಿನ ನಷ್ಟ ಹಿಂದಿನ ಬಾರಿಗಿಂತ ದುಪ್ಪಟ್ಟಾಗಿದೆ, ಪರಿಸ್ಥಿತಿ ಅಷ್ಟೇ ಗಂಭೀರವಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30 ಕ್ಕಿಂತ ಅಧಿಕ ಭಿತ್ತನೆಯಾಗಿದೆ. ಮಳೆ ಮತ್ತು ಪ್ರವಾಹದಿಂದಾಗಿ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಶೇಂಗಾ, ಈರುಳ್ಳಿ, ಅಡಿಕೆ, ಭತ್ತ, ಕಾಫಿ, ಮೆಣಸು, ಜೋಳ, ದ್ವಿದಳ ಧಾನ್ಯಗಳು, ಹತ್ತಿ, ರಾಗಿ, ಸಜ್ಜೆ ಮುಂತಾದ ಬೆಳೆಗಳೆಲ್ಲ ನಾಶವಾಗಿವೆ.

ಕಳೆದ ವರ್ಷ ಬಿದ್ದ 1ಲಕ್ಷಕ್ಕೂ ಹೆಚ್ಚುಮನೆಗಳಿಗೆ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ 2,47,000 ಮನೆಗಳಿಗೆ ಹಾನಿಯಾಗಿದೆ ಎಂದು ಮನವಿ ಸಲ್ಲಿಸಲಾಗಿದೆ. ಆದರೆ ಪರಿಹಾರ ನೀಡಿರುವುದು ಕೇವಲ 1,24,000 ಮನೆಗಳಿಗೆ ಮಾತ್ರ. ಪೂರ್ಣ ಹಾನಿಯಾದ ಮನೆಗಳಿಗೆ ರೂ.5 ಲಕ್ಷ ನೀಡುವುದಾಗಿ ಹೇಳಿ ಇದುವರೆಗೆ ಕೇವಲ ರೂ.1 ಲಕ್ಷ ಮಾತ್ರ ನೀಡಲಾಗಿದೆ.

ಕೊಚ್ಚಿ ಹೋದ ಭೂಮಿಗೆ, ಕೊಳೆತು ಹೋದ ಬೆಳೆಗಳಿಗೆ ಇನ್ನೂ ಪರಿಹಾರವನ್ನೇ ನೀಡಿಲ್ಲವೆಂದು ನಾನು ಭೇಟಿಕೊಟ್ಟ ಗ್ರಾಮಗಳ ರೈತರು ಪದೇ ಪದೇ ಹೇಳುತ್ತಿದ್ದಾರೆ. ಕಳೆದ ವರ್ಷ ನದಿ ಪಾತ್ರಗಳ ಗ್ರಾಮಗಳ ಜನರು ತೀವ್ರ ನೋವು ಅನುಭವಿಸಿದರು.

ಸೆಪ್ಟೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 8.68 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 0.88 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿವೆ. ಅಂದರೆ 11 ಲಕ್ಷ ಹೆಕ್ಟೇರ್ಗಳಲ್ಲಿ ಬೆಳೆದ ಬೆಳೆ ಸೆಪ್ಟೆಂಬರ್ವರೆಗೆ ಹಾನಿಯಾಗಿದೆ. ಈಗ ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಕಂಗೆಟ್ಟು ಕೂತಿದೆ.

ಬೀದರ್ ಜಿಲ್ಲೆಯಲ್ಲಿ ಬಿತ್ತನೆಯಾದ 3,70,982 ಹೆಕ್ಟೇರ್ಗಳಲ್ಲಿ 2,47,209 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಒಟ್ಟು 3,44,085 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 1.12 ಲಕ್ಷ ಹೆಕ್ಟೇರ್ ತೊಗರಿ, 34 ಸಾವಿರ ಹೆಕ್ಟೇರ್ ಹತ್ತಿ ನಾಶವಾಗಿದೆ.

ಬಿಜಾಪುರ ಜಿಲ್ಲೆಯಲ್ಲಿ 1,60,739 ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 11,929 ಹೆಕ್ಟೇರ್ ತೋಟದ ಬೆಳೆಗಳು ಒಟ್ಟು 1,72,668 ಹೆಕ್ಟೇರ್ ನಾಶವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಗಳು ಹೇಳುತ್ತಿವೆ. ನಾನು ಭೇಟಿ ಕೊಟ್ಟಿದ್ದಾಗಲೂ ಹೊಲಗಳಲ್ಲಿ ಸುಮಾರು 2 ಅಡಿ ನೀರು ನಿಂತಿತ್ತು. ಸುಮಾರು ಒಂದು ಲಕ್ಷ ಮನೆಗಳಿಗೆ ಹಾನಿಯಾಗಿದೆ.

ಗುಲ್ಬರ್ಗ ಜಿಲ್ಲಾಧಿಕಾರಿ ಸಮೀಕ್ಷೆ ಪ್ರಕಾರ ಅಲ್ಲಿ ಸುಮಾರು 20,000 ಮನೆಗಳಿಗೆ ಹಾನಿಯಾಗಿದೆ. ದವಸ ಧಾನ್ಯ, ಬಟ್ಟೆ ಬರೆ, ಪುಸ್ತಕ ಕೊಚ್ಚಿ ಹೋಗಿವೆ. ರಾಯಚೂರಿನಲ್ಲಿ 3 ದಿನಗಳ ಮಳೆಗೆ ಸುಮಾರು 80,000 ಹೆಕ್ಟೇರ್, ಯಾದಗಿರಿಯಲ್ಲಿ 50,000 ಹೆಕ್ಟೇರ್, ಕೊಪ್ಪಳ 8,000 ಹೆಕ್ಟೇರ್, ಬಳ್ಳಾರಿಯಲ್ಲೂ ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗಿದೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಬೆಳೆದ ಬಹುಪಾಲು ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲಾಡಳಿತ ಸಂಪೂರ್ಣವಾಗಿ ಸಮೀಕ್ಷೆಯನ್ನೇ ಮಾಡಿಲ್ಲ. ಸರ್ಕಾರದ ಸಚಿವರುಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಂಪೂರ್ಣ ನಿರ್ಲಕ್ಷಿಸಿದ ಮೇಲೆ ತಹಶೀಲ್ದಾರ್, ಡಿ.ಸಿ.ಗಳು ಎಷ್ಟರ ಮಟ್ಟಿಗೆ ಜನರ ಜೊತೆ ನಿಲ್ಲಲು ಸಾಧ್ಯ?

ರಾಜ್ಯ ಸರ್ಕಾರವು ಸುಮಾರು 90,000 ಕೋಟಿಗೂ ಹೆಚ್ಚು ಮೊತ್ತದ ಸಾಲ ಮಾಡುತ್ತಿದೆ. ರಾಜ್ಯದ ಜನ ಮತ್ತು ರಾಜ್ಯದ ಆಸ್ತಿಯನ್ನು ಒತ್ತೆ ಇಟ್ಟು ತರುವ ಸಾಲ ಜನರ ಕಣ್ಣೀರು ಒರೆಸಬೇಕಲ್ಲದೇ ಭ್ರಷ್ಟಾಚಾರಕ್ಕೆ ಬಳಕೆಯಾಗಬಾರದು. ಜನರ ಸಂಕಷ್ಟ ಪರಿಹರಿಸಲು ಬಳಕೆಯಾಗದ ಸಾಲವನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.