ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಅವರು ಹೃದಯ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಕುಟುಂಬದ ಪ್ರಕಾರ, ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಮನವಿ ಮಾಡಿದ್ದಾರೆ.
ಖ್ಯಾತ ಕೊಳಲು ವಾದಕ, ಝಾಕೀರ್ ಹುಸೇನ್ ಅವರ ಆಪ್ತ ಸ್ನೇಹಿತ ರಾಕೇಶ್ ಚೌರಾಸಿಯಾ ಅವರು ಭಾನುವಾರ ತಮ್ಮ ಸ್ನೇಹಿತನ ಸ್ಥಿತಿಯ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ. “ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಇದೀಗ ಐಸಿಯುಗೆ ದಾಖಲಾಗಿದ್ದಾರೆ. ನಾವೆಲ್ಲರೂ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದೇವೆ “ಎಂದು ಹೇಳಿದರು.
ಹುಸೇನ್ ಅವರ ಆಪ್ತ ಮೂಲವೊಂದರ ಪ್ರಕಾರ, 73 ವರ್ಷದ ಅವರು ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿದ್ದರು. “ಅವರನ್ನು ಕಳೆದ ವಾರದಿಂದ ಹೃದಯ ಸಂಬಂಧಿತ ಸಮಸ್ಯೆಗಾಗಿ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿದುಬಂದಿದೆ.
ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಹುಸೇನ್, ಭಾರತ ಮತ್ತು ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಸ್ಥಿತಿಯ ಬಗ್ಗೆ ಅವರ ಕುಟುಂಬವು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅವರ ಚೇತರಿಕೆಯ ಬಗ್ಗೆ ಅವರು ಭರವಸೆ ಹೊಂದಿದ್ದಾರೆ.