Pickles : ಹೆಚ್ಚು ಉಪ್ಪಿನಕಾಯಿ (Pickles ) ಸೇವಿಸುವುದರಿಂದ ಅದರಲ್ಲಿರುವ ಹೆಚ್ಚಿನ ಸೋಡಿಯಂ ಮತ್ತು ಕೆಲವೊಮ್ಮೆ ಹೆಚ್ಚಿನ ಸಕ್ಕರೆ ಅಥವಾ ಎಣ್ಣೆ ಅಂಶದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ಸೋಡಿಯಂ ಅಧಿಕ ರಕ್ತದೊತ್ತಡ, ಉಬ್ಬುವುದು ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಎಣ್ಣೆ ಅಂಶವು ಹೆಚ್ಚಿದ ಕೊಲೆಸ್ಟ್ರಾಲ್ ಮತ್ತು ಸಂಭಾವ್ಯ ಯಕೃತ್ತಿನ ಹಾನಿಗೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಕೆಲವು ಅಧ್ಯಯನಗಳು ಹೆಚ್ಚಿನ ಉಪ್ಪು ಆಹಾರ ಮತ್ತು ಹೊಟ್ಟೆಯ ಕ್ಯಾನ್ಸರ್ ಅಪಾಯದ ನಡುವಿನ ಸಂಬಂಧವನ್ನು ಸೂಚಿಸುತ್ತವೆ.
ಕೊಲೆಸ್ಟ್ರಾಲ್ ಮಟ್ಟ ಏರಿಕೆ
ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಸಂಭವಿಸುತ್ತದೆ. ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಸಂಗ್ರಹಿಸಿಡಲು ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಹಾಗಾಗಿ ಅತಿಯಾಗಿ ಉಪ್ಪಿನಕಾಯಿಯನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿ ಹೃದಯ ಸ೦ಬ೦ಧಿ ಕಾಯಿಲೆಗಳು ಉಂಟಾಗುತ್ತದೆ.
ರಕ್ತದೊತ್ತಡ ಸಮಸ್ಯೆ
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಪ್ಪಿನಕಾಯಿ ವಿಷವಿದ್ದಂತೆ. ಉಪ್ಪಿನಕಾಯಿಯಲ್ಲಿರುವ ಅತಿಯಾದ ಉಪ್ಪು ಅಂದರೆ ಸೋಡಿಯಂ ಪ್ರಮಾಣವವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತನಾಳಗಳಿಗೆ ಹಾನಿಯು೦ಟುಮಾಡುತ್ತದೆ.
ಮೂಳೆಗಳ ದುರ್ಬಲತೆ
ಉಪ್ಪಿನಕಾಯಿಯಲ್ಲಿ ಹೆಚ್ಚಿರುವ ಸೋಡಿಯಂ ಅಂಶದ ಕಾರಣದಿಂದಾಗಿ ದೇಹವು ಕ್ಯಾಲ್ಸಿಯಂನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಉಪ್ಪಿನಕಾಯಿಯ ಅತಿಯಾದ ಸೇವನೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಇದು ಸಂಧಿವಾತ ಮತ್ತು ಕೀಲುನೋವಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಅಸಿಡಿಟಿ
ಉಪ್ಪಿನಕಾಯಿಗೆ ಕಟು ಮಸಾಲೆಗಳನ್ನು ಹಾಕಲಾಗುತ್ತದೆ. ಹೀಗಾಗಿ ಉಪ್ಪಿನಕಾಯಿಯನ್ನು ಹೆಚ್ಚು ಸೇವನೆ ಮಾಡುವ ವ್ಯಕ್ತಿಯು ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕ್ರಿಯೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ದೀರ್ಘಕಾಲದವರೆಗೆ ಉಪ್ಪಿನಕಾಯಿಯನ್ನು ಸೇವಿಸುವುದರಿಂದ ಹೊಟ್ಟೆ ಹುಣ್ಣಿನಂತಹ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳುತ್ತದೆ.
ಊತ ಮತ್ತು ನೋವು
ಉಪ್ಪಿನಕಾಯಿಯ ಅತಿಯಾದ ಸೇವನೆಯಿ೦ದ ದೇಹದಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು. ಏಕೆ೦ದರೆ ಉಪ್ಪಿನಕಾಯಿಯನ್ನು ದೀರ್ಘಕಾಲದವರೆಗೆ ಕೆಡದಂತೆ ಇರಲು ಹಲವು ಸಂರಕ್ಷಕಗಳನ್ನು ಬಳಸಲಾಗುತ್ತದೆ. ಇದು ದೇಹದಲ್ಲಿ ಊತ ಮತ್ತು ನೋವನ್ನು ಉಂಟುಮಾಡಬಹುದು.




