ನವದೆಹಲಿ: ಖೇಲೋ ಇಂಡಿಯಾ ಯೋಜನೆಯಡಿ 323 ಹೊಸ ಕ್ರೀಡಾ ಮೂಲಸೌಕರ್ಯ ಯೋಜನೆಗಳು ಒಟ್ಟು 3073.97 ಕೋಟಿ ಮೌಲ್ಯದಲ್ಲಿ ಅನುಮೋದನೆಗೊಂಡಿವೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ರಾಜ್ಯಸಭೆಗೆ ಬರೆದ ಉತ್ತರದಲ್ಲಿ ಮಾಹಿತಿ ನೀಡಿದರು.
ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ಕಾರ್ಯಕ್ರಮ 2016-17ರಲ್ಲಿ ದೇಶಾದ್ಯಂತ ಕ್ರೀಡಾಕ್ಷೇತ್ರದಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಶ್ರೇಷ್ಠತೆಯ ಪ್ರೋತ್ಸಾಹ ಎಂಬ ಎರಡು ಉದ್ದೇಶದೊಂದಿಗೆ ಆರಂಭಿಸಲಾಯಿತು. ಈ ಯೋಜನೆ 2017-18 ರಿಂದ 2019-20ರ ವರೆಗೆ ಮೂರು ವರ್ಷಗಳ ಅವಧಿಗೆ 1756 ಕೋಟಿ ಹಣಕಾಸು ಅನುದಾನದೊಂದಿಗೆ ಮರುರಚನೆ ಮತ್ತು ಅನುಮೋದನೆಗೊಂಡಿತು.
ಈ ಯೋಜನೆಗೆ 2020-21ರ ವರೆಗೆ 328.77 ಕೋಟಿ ಬಜೆಟ್‌ನೊಂದಿಗೆ ತಾತ್ಕಾಲಿಕ ವಿಸ್ತರಣೆ ನೀಡಲಾಯಿತು. ಮತ್ತು 2021-22 ರಿಂದ 2025-26ರ ವರೆಗೆ ಐದು ವರ್ಷಗಳ ಕಾಲ 3790.50 ಕೋಟಿ ಹಣಕಾಸು ವಿನ್ಯಾಸದೊಂದಿಗೆ ಮರುಪರಿಶೀಲನೆ ಮಾಡಿ ವಿಸ್ತರಿಸಲಾಗಿದೆ.