ಶಿವಮೊಗ್ಗ: ರಾಜ್ಯದ ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಮಿಡಿಮಾವು ಬೆಳೆಯನ್ನು ಪ್ರಸಿದ್ಧಿಗೊಳಿಸಿದ ಕೃಷಿ ವಿಜ್ಞಾನಿ ಬಿ.ವಿ.ಸುಬ್ಬರಾವ್(87) ಕೊನೆಯುಸಿರೆಳೆದಿದ್ದಾರೆ. ಮಿಡಿಮಾವು ತಜ್ಞ ಎಂದೇ ಪ್ರಸಿದ್ಧರಾಗಿದ್ದ ಅವರು ಇತ್ತೀಚೆಗೆ ವಯೋಸಹಜವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಮಿಡಿ ಮಾವು ತಜ್ಞ ಬಿ.ವಿ.ಸುಬ್ಬರಾವ್ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿ ಪಂಚಾಯತ್ ವ್ಯಾಪ್ತಿಯ ಬೇಳೂರು ಗ್ರಾಮದವರಾಗಿದ್ದರು. ಮಲೆನಾಡಿನ ಮಾವುತಜ್ಞರೆಂದೇ ಕರೆಸಿಕೊಳ್ಳುತ್ತಿದ್ದ ಅವರು ಸುಮಾರು 120 ಜಾತಿಯ ಮಾವಿನ ಮಿಡಿಗಳನ್ನು ಬೆಳೆಸಿದ್ದರು.
ವಿಶೇಷವಾಗಿ ಅವರು ಗುಣಮಟ್ಟದ ತಳಿ ಸಂರಕ್ಷಣೆಯಲ್ಲಿ ಹೆಚ್ಚು ಕೆಲಸ ಮಾಡಿದ್ದರು. ಕೃಷಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಇವರ ಸಂಶೋಧನೆಗಳು ನಡೆಯುತ್ತಿದ್ದವು. ಇವರ ಈ ಸಾಧನೆಗೆ ಹಲವು ಸಂಘ ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಿದ್ದವು.
ಅವರು ಇಂದು ಸಂಜೆ ವೇಳೆಗೆ ಅನಾರೋಗ್ಯದಿಂದ ಮನೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಸುಬ್ಬರಾವ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.