ಹರಿಯಾಣ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಯುವಕರು-ಯುವತಿಯರಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗಿದೆ. ಅದರಲ್ಲೂ ಎಷ್ಟೋ ಮಂದಿ ಲೈಕ್ಸ್ ಆಸೆಗೆ ಬಿದ್ದು ಸಿಕ್ಕಸಿಕ್ಕಲ್ಲಿ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ರೀಲ್ಸ್ ಮಾಡುವಾಗ ಎಷ್ಟೋ ಮಂದಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದು, ಎಷ್ಟೋ ಮಂದಿ ಸಂಕಷ್ಟ ತಂದುಕೊಂಡಿದ್ದಾರೆ.
ಇದೀಗ ಹರಿಯಾಣದ ಪಾಣಿಪತ್‌ನಲ್ಲೂ ಇಂತಹುದೇ ಘಟನೆಯೊಂದು ನಡೆದಿದೆ. ಜನಜಂಗುಳಿ ತುಂಬಿದ್ದ ಮಾರುಕಟ್ಟೆಯಲ್ಲಿ ಅಶ್ಲೀಲ ರೀಲ್ಸ್ ಮಾಡಲು ಹೋಗಿ ಯುವಕನೋರ್ವ ಧರ್ಮದೇಟು ತಿಂದಿದ್ದಾನೆ. ಜನರು ಹಿಡಿದು ಸರಿಯಾಗಿ ಬುದ್ದಿಕಲಿಸಿ ಕಳುಹಿಸಿದ್ದಾರೆ.
ಯುವಕನೋರ್ವ ಮಹಿಳೆಯರ ಒಳಉಡುಪು ಧರಿಸಿ ಮಾರುಕಟ್ಟೆಯಲ್ಲಿ ನಿಂತು ಅಶ್ಲೀಲವಾಗಿ ಡ್ಯಾನ್ಸ್ ಮಾಡಲು ಆರಂಭಿಸಿದ್ದಾನೆ. ಮೊದಲು ಈತನನ್ನು ನೋಡಿದ ಜನರು ಹುಚ್ಚ ಎಂದುಕೊಂಡು ಸುಮ್ಮನಾಗಿದ್ದರು. ಆದರೆ ಬಳಿಕ ಈತ ರೀಲ್ಸ್ ಮಾಡುತ್ತಿರುವುದನ್ನು ಗಮನಿಸಿದ ಜನರು ಮಹಿಳೆಯರ ಒಳಉಡುಪಿ ಧರಿಸಿ ಅಶ್ಲೀಲ ವರ್ತನೆ ತೋರಿದ ಹಿನ್ನಲೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಯುವಕನಿಗೆ ಥಳಿಸಿದ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಈತನ ರೀಲ್ಸ್‌ಗಿಂತ ಹೆಚ್ಚು ಹರಿದಾಡಿದೆ. ವೀಡಿಯೋ ನೋಡಿದ ಜನರು ಯುವಕನ ಹುಚ್ಚಾಟಕ್ಕೆ ಸರಿಯಾಗಿ ಒದೆ ಬಿದ್ದಿದೆ ಎಂದು ಕಮೆಂಟ್ ಹಾಕಿದ್ದಾರೆ.