ಬೆಂಗಳೂರು: ಬೆಂಗಳೂರು ನಗರದಲ್ಲಿ ಭಿಕ್ಷೆ ಬೇಡುತ್ತಿರುವ ವ್ಯಕ್ತಿಯೋರ್ವ ಈ ಮೊದಲು ಟೆಕ್ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ಎನ್ನುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಷ್ಟು ದೊಡ್ಡ ಕಂಪೆನಿ ಕೆಲಸದಲ್ಲಿದ್ದಾತ ಹೀಗೆ ಭಿಕ್ಷೆ ಬೇಡುತ್ತಿರುವುದಕ್ಕೆ ಕಾರಣ ಏನು ಅನ್ನೋದು ಹಲವರ ಕುತೂಹಲ ಹೆಚ್ಚಿಸಿದೆ.
ಬೆಂಗಳೂರಿನ ಶರತ್ ಯುವರಾಜ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಎಂಜಿನಿಯರ್‌ನನ್ನು ಮಾತನಾಡಿಸಿರುವ ವೀಡಿಯೋಗಳನ್ನು ಹಾಕಿಕೊಂಡಿದ್ದಾರೆ. ಈತ ಜಯನಗರದ 8ನೇ ಬ್ಲಾಕ್‌ನ ಜೆಎಸ್ಎಸ್ ಕಾಲೇಜು ಬಳಿಯ ರಸ್ತೆಯೊಂದರಲ್ಲಿ ಪತ್ತೆಯಾಗಿದ್ದಾಗಿ ಶರತ್ ಹೇಳಿಕೊಂಡಿದ್ದಾರೆ.
ಕೆಂಪು ಟೀ ಶರ್ಟ್ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ಮಾತನಾಡಿಸಿದಾಗ ಆತನ ಇಂಗ್ಲೀಷ್ ಇವರನ್ನು ಅಚ್ಚರಿಗೊಳಿಸಿತ್ತು. ಹೀಗಾಗಿ ಆತನೊಂದಿಗೆ ಮಾತಿಗಿಳಿದಾಗ, ಆತ ಈ ಹಿಂದೆ ಮೈಸೂರು ರಸ್ತೆ ಸಮೀಪದ ಸತ್ವ ಗ್ಲೋಬಲ್ ಸಿಟಿಯ, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್‌ನಲ್ಲಿ ಪ್ರಮುಖ ಟೆಕ್ ಕನ್ಸಲ್ಟಿಂಗ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದ ಎನ್ನುವುದು ತಿಳಿದುಬಂದಿದ್ದು ಶಾಕ್ ಮಾಡಿದೆ.
ವಿದೇಶಗಳಿಗೂ ಸಹ ಪ್ರವಾಸ ಮಾಡಿರುವ ವ್ಯಕ್ತಿ ಉತ್ತಮ ಹುದ್ದೆಯಲ್ಲಿದ್ದು, ಒಳ್ಳೆಯ ಜ್ಞಾನವಿದ್ದರೂ ಸಹ ಮನೆಯವರನ್ನು ಕಳೆದುಕೊಂಡ ಖಿನ್ನತೆ ಅವರ ಈ ಸ್ಥಿತಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ. ವಿಪರೀತ ಕುಡಿತದ ಚಟಕ್ಕೆ ಬಿದ್ದು ಇದೀಗ ಎಲ್ಲವನ್ನೂ ಕಳೆದುಕೊಂಡು ಭಿಕ್ಷೆ ಬೇಡಿಕೊಂಡು ಬದುಕುತ್ತಿದ್ದೇನೆ ಎಂದು ಹೇಳಿದ್ದಾರೆ. ವೀಡಿಯೋ ಹಂಚಿಕೊಂಡಿರುವ ಶರತ್ ಇವರಿಗೆ ನೆರವು ನೀಡಲು ಯಾವುದಾದರೂ ಎನ್‌ಜಿಓ ಇಲ್ಲವೇ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
https://www.instagram.com/reel/DCTkm10pj06/?igsh=ZWdobXl6Zmtqeml0