ಶಿರಸಿ: ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದು ಮರಳಿಸದ ವ್ಯಕ್ತಿಯ ವಿರುದ್ಧ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಭಿಷೇಕ ರಾಮಚಂದ್ರ ಜೋಶಿ ಇವರು ಆರೋಪಿಗೆ 90 ಸಾವಿರ ರೂ ದಂಡ ಹಾಗೂ 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ 70 ಸಾವಿರ ರೂ ಸಾಲ ಪಡೆದುಕೊಂಡಿದ್ದ ಶ್ರೀನಿವಾಸ ಸೋಮರಾಜ್ ಎಂಬುವವರು ಹಣವನ್ನು ಮರಳಿಸುವಲ್ಲಿ ವಿಫಲರಾಗಿದ್ದರು. ಬಳಿಕ ಅವರಿಗೆ ಜಾಮೀನುದಾರನಾಗಿದ್ದ ವಿನೋದ ನಾಗಪ್ಪ ಹರಿಜನ ಎಂಬ ವ್ಯಕ್ತಿಯೂ ಅದನ್ನು ತೀರಿಸಲು ವಿಫಲರಾದ ಹಿನ್ನಲೆಯಲ್ಲಿ ಸಂಘದ ಪರವಾಗಿ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಧಾವೆ ಹೂಡಿದ್ದರು. ಇಲ್ಲಿ ಜಾಮೀನುದಾರ ಸಾಲಕ್ಕೆ ತಮ್ಮ ಚೆಕ್ ಅನ್ನು ನೀಡಿದ್ದರು.
ಇದಕ್ಕೆ ಸಂಬಂಧಿಸಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಅಭಿಷೇಕ ರಾಮಚಂದ್ರ ಜೋಶಿ ಸಾಲ ಮರಳಿಸದ ಜಾಮೀನುದಾರ ವಿನೋದ ಹರಿಜನ ಎಂಬುವವರು 5 ಸಾವಿರ ರೂ ದಂಡದ ರೂಪದಲ್ಲಿ, 85 ಸಾವಿರ ಸಂಘಕ್ಕೆ ಕಟ್ಟುವಿಕೆ, ಒಟ್ಟೂ ಸೇರಿ 90 ಸಾವಿರ ಹಣ ನೀಡಬೇಕು. ಅಥವಾ 3 ತಿಂಗಳು ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ದೂರುದಾರ ಸಂಘದ ಪರವಾಗಿ ನ್ಯಾಯವಾದಿ ಪ್ರಶಾಂತ ನಾಯ್ಕ ವಾದ ಮಂಡಿಸಿದ್ದರು.