ಕೇರಳ: ರಸ್ತೆಯಲ್ಲಿ ತೆರಳುವ ವೇಳೆ ಅಂಬ್ಯುಲೆನ್ಸ್ ಕಂಡರೆ ಯಾರೇ ಆದರೂ ದಾರಿ ಬಿಟ್ಟುಕೊಡುತ್ತಾರೆ. ಅದು ಎಲ್ಲರ ಜವಾಬ್ದಾರಿಯೂ ಕೂಡಾ ಆಗಿದೆ. ಆದರೆ ಕೇರಳದಲ್ಲಿ ಕಾರು ಚಾಲಕನೋರ್ವ ಸುಮಾರು ಎರಡು ನಿಮಿಷಗಳ ಕಾಲ ಅಂಬ್ಯುಲೆನ್ಸ್‌ಗೆ ದಾರಿ ಬಿಡದೇ ಸತಾಯಿಸಿದ್ದು, ಪೊಲೀಸರು ಕಾರು ಚಾಲಕನಿಗೆ ಭಾರೀ ದಂಡ ವಿಧಿಸಿ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ಕಾರೊಂದು ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಅಂಬ್ಯುಲೆನ್ಸ್ ಬಂದಿದೆ. ಅಲ್ಲದೇ ಅಂಬ್ಯುಲೆನ್ಸ್ ಸೈರನ್ ಸಹ ಹಾಕಿದ್ದು, ಹಾರ್ನ್ ಮಾಡಿ ದಾರಿ ಬಿಡುವಂತೆ ಕೇಳಿದ್ದಾನೆ. ಆದರೆ ಕಾರು ಚಾಲಕ ಮಾತ್ರ ದಾರಿ ಬಿಟ್ಟು ಕೊಟ್ಟಿಲ್ಲವಾಗಿದ್ದು, ವಿನಾಕಾರಣ ಅಂಬ್ಯುಲೆನ್ಸ್ ದಾರಿ ಸಿಗದೇ ಕಾರಿನ ಹಿಂದೆ ಬಹಳ ಹೊತ್ತು ಚಲಿಸಿದೆ.
ಅಂಬ್ಯುಲೆನ್ಸ್ ಸಿಬ್ಬಂದಿ ಕಾರು ಚಾಲಕನ ದುರ್ವರ್ತನೆಯನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದರು. ಬಳಿಕ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಸಾರ್ವಜನಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋ ಗಮನಿಸಿದ ಪೊಲೀಸರು ಕಾರಿನ ನಂಬರ್ ಪ್ಲೇಟ್‌ನಿಂದ ಕಾರನ್ನು ಪತ್ತೆ ಮಾಡಿದ್ದಾರೆ.
ಅಂಬ್ಯುಲೆನ್ಸ್‌ಗೆ ದಾರಿ ಕೊಡದೇ ಸತಾಯಿಸಿದ ಕಾರು ಚಾಲಕನನ್ನು ಸಿಯಾಜ್ ಎಂದು ಗುರುತಿಸಿದ್ದು, ಕಾರು ಮಾಲೀಕನಿಗೆ ಬರೋಬ್ಬರಿ 2.5 ಲಕ್ಷ ದಂಡ ವಿಧಿಸಿದ್ದಾರೆ. ಅಲ್ಲದೇ ಚಾಲಕನ ಚಾಲನಾ ಪರವಾನಗಿ(Driving License)ಯನ್ನು ರದ್ದುಗೊಳಿಸಿದ್ದಾಗಿ ತಿಳಿದು ಬಂದಿದೆ. ಪೊಲೀಸರ ಈ ಕ್ರಮಕ್ಕೆ ನೆಟ್ಟಿಗರು ಅಭಿನಂದಿಸಿದ್ದು ಕಾರು ಚಾಲಕನಿಗೆ ಸರಿಯಾಗಿ ಬುದ್ದಿಕಲಿಸಿದ್ದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194 ಇ ಪ್ರಕಾರ, ನೀವು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡದಿದ್ದರೆ, ನಿಮಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 10,000 ದಂಡ, ಇಲ್ಲವೇ ಸೆರೆವಾಸ ಮತ್ತು ಕೆಲವು ಸಂದರ್ಭಗಳಲ್ಲಿ ಎರಡನ್ನೂ ವಿಧಿಸಲು ಅವಕಾಶವಿದೆ.