ಮಂಗಳೂರು: ಪತ್ನಿ ಹಾಗೂ ಪುತ್ರನ ಕೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್ ಅವರ ತಾಯಿ ಹಾಗೂ ಸಹೋದರಿಯನ್ನು ಬಂಧಿಸಿದ್ದು, ಅವರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಾಯಿ ಶ್ಯಾಮಲಾ ಭಟ್ ಹಾಗೂ ಸಹೋದರಿ ಕಣ್ಮಣಿ ಬಂಧಿತರು. ಅವರ ವಿರುದ್ಧ ಮೂಲ್ಕಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಿತ್ತು.
ನ.8ರಂದು ಪಕ್ಷಿಕೆರೆಯ ಜಲಜಾಕ್ಷಿ ರೆಸಿಡೆನ್ಸಿಯಲ್ಲಿ ವಾಸವಾಗಿದ್ದ ಕಾರ್ತಿಕ್ ಭಟ್ (32), ಪತ್ನಿ ಪ್ರಿಯಾಂಕಾ (28) ಮತ್ತು ಮಗು ಹೃದಯ್ (4)ನನ್ನು ಗಾಜಿನ ತುಂಡಿನಿಂದ ಇರಿದು ಕೊಂದು, ತಾನು ಬೆಳ್ಳಾಯರು ಬಳಿ ರೈಲಿಗೆ ತಲೆ ಕೊಟ್ಟು ಆತ್ಮ ಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮೊದಲು ಡೆತ್‌ನೋಟ್ ಬರೆದಿದ್ದು, ಅದರಲ್ಲಿ ತಾಯಿ ಮತ್ತು ಸಹೋದರಿಯ ಕಿರುಕುಳದ ಬಗ್ಗೆ ತಿಳಿಸಲಾಗಿತ್ತು. ಅದರಂತೆ ಪ್ರಿಯಾಂಕಾ ತಾಯಿ ನೀಡಿದ ದೂರಿನಂತೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ತಿಕ್ ಇತ್ತೀಚೆಗೆ ಹೊಸ ಸ್ಕೂಟರ್ ಅನ್ನು ತಂದೆಯ ಹೆಸರಿನಲ್ಲಿ ಖರೀದಿಸಿದ್ದ. ಫ್ಲಾಟ್‌ನಲ್ಲಿ ತಂದೆ ತಾಯಿಯ ಜೊತೆಗೆ ವಾಸಿಸುತ್ತಿದ್ದರೂ ಪತ್ನಿ, ಮಗುವಿನ ಜೊತೆಗೆ ಪ್ರತ್ಯೇಕ ಕೋಣೆಯಲ್ಲಿರುತ್ತಿದ್ದರು. ಪತ್ನಿಯೊಂದಿಗೆ ಜಗಳವಾಡುತ್ತಿರಲಿಲ್ಲ. ಮಗುವನ್ನು ಪ್ರತಿದಿನ ಬೆಳಗ್ಗೆ ಸುರತ್ಕಲ್‌ನ ಶಾಲೆಗೆ ಕರೆದೊಯ್ದು, ಮಧ್ಯಾಹ್ನ ವಾಪಸ್ ಕರೆದುಕೊಂಡು ಬಂದು ಪತ್ನಿ, ಮಗುವಿನೊಂದಿಗೆ ಹೊಟೇಲ್‌ಗೆ ಹೋಗಿ ಊಟ ಮಾಡುತ್ತಿದ್ದರು. ಸ್ಥಳೀಯರ ಪ್ರಕಾರ ಮದುವೆಯಾದ ಬಳಿಕ ಕಾರ್ತಿಕ್ ಬದಲಾಗಿದ್ದು, ಶೋಕಿ ಜೀವನ ನಡೆಸುತ್ತಿದ್ದ. ಗೆಳೆಯರಿಂದ ಸಾಲವನ್ನು ಪಡೆಯುತ್ತಿದ್ದ. ಕಾರ್ತಿಕ್ ಮತ್ತು ಪ್ರಿಯಾಂಕಾಳ ಮೊಬೈಲ್ ನಾಪತ್ತೆಯಾಗಿದ್ದು, ಮೊಬೈಲ್ ಸಿಕ್ಕಿದಲ್ಲಿ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ. ಮೂಲ್ಕಿ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.