ಬೆಳಗಾವಿ: ನಗರದಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತಕ್ಕೆ ಇಬ್ಬರು ಯುವಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ನಗರದ ಮರಾಠ ರೆಜಿಮೆಂಟ್‌ನಲ್ಲಿ ನ.7ರಿಂದ ಟಿಎ ಮುಕ್ತ ಸೇನಾ ನೇಮಕಾತಿ ರ್‍ಯಾಲಿ ನಡೆಯುತ್ತಿದ್ದು, 16 ಜಿಲ್ಲೆಗಳ ಯುವಕರಿಗಾಗಿ ಈ ರ್‍ಯಾಲಿ ಆಯೋಜಿಸಲಾಗಿತ್ತು. ಭಾನುವಾರ ಕೊನೆಯ ದಿನವಾಗಿತ್ತು. ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಲು 30 ಸಾವಿರಕ್ಕೂ ಅಧಿಕ ಯುವಕರು ಬೆಳಗಾವಿಗೆ ಆಗಮಿಸಿದ್ದು, ನಗರದ ಕ್ಲಬ್ ರಸ್ತೆಯ ಸಿಪಿಎಡ್ ಮೈದಾನದ ಬಳಿ ನಿರೀಕ್ಷೆಗೂ ಮೀರಿ ಯುವಕರು ಆಗಮಿಸಿದ್ದರು. ಈ ವೇಳೆ, ನೂಕು ನುಗ್ಗಲು ಉಂಟಾಗಿದೆ. ಪರಿಸ್ಥಿತಿ ಕೈಮೀರುವ ಸ್ಥಿತಿ ತಲುಪಿದಾಗ ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರದಿಂದ ತಪ್ಪಿಸಿಕೊಳ್ಳಲು ಯುವಕರು ಓಡಲಾರಂಭಿಸಿದ್ದರಿಂದ ಕಾಲ್ತುಳಿತ ಉಂಟಾಗಿದೆ.
ಘಟನೆಯಲ್ಲಿ ಹುಬ್ಬಳ್ಳಿಯ ಅಲ್ಲಾಭಕ್ಷ ಯರಗಟ್ಟಿ ಹಾಗೂ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರವೀಣ್ ಮಕಾಳೆ ಗಾಯಗೊಂಡಿದ್ದಾರೆ. ಇದರಿಂದ ಸಹಸ್ರಾರು ಯುವಕರು ರ್‍ಯಾಲಿಯಲ್ಲಿ ಪಾಲ್ಗೊಳ್ಳದೇ ನಿರಾಸೆಯಿಂದ ಊರುಗಳತ್ತ ಪ್ರಯಾಣ ಬೆಳೆಸಿದರು.
ಸಹಸ್ರಾರು ಯುವಕರು ರ್‍ಯಾಲಿಗೆ ಆಗಮಿಸಿದ್ದರಿಂದ ಕ್ಲಬ್ ರಸ್ತೆಯ ಹರ್ಷ ಹೋಟೆಲ್‌ನಿಂದ ಇಂಡಲಗಾ ಗಣೇಶ ದೇವಸ್ಥಾನದವರೆಗೂ ಯುವಕರ ಜನಜಂಗುಳಿ ಕಂಡು ಬಂತು. ಹೀಗಾಗಿ, ಪೊಲೀಸರು ಬೆಳಗ್ಗೆಯಿಂದಲೇ ಹರ್ಷ ಹೋಟೆಲ್ ಬಳಿ ಹಾಗೂ ಹಿಂಡಲಗಾ ಗಣೇಶ ದೇವಸ್ಥಾನ ಬಳಿ ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರು.