ಮಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಚುನಾವಣೆಯಲ್ಲಿ ಮಾತ್ರ ಅಳು ಬರುತ್ತದೆ. ಅವರು ರಾಷ್ಟ್ರಧ್ವಜ ಹಾರಿಸೋಕೆ ರಾಮನಗರ ಮತ್ತು ಚನ್ನಪಟ್ಟಣಕ್ಕೂ ಹೋಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಏರ್ಪೋರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಿಸ್ಟರ್ ಕುಮಾರಸ್ವಾಮಿ, ಒಂದು ರಾಷ್ಟ್ರಧ್ವಜ ಹಾರಿಸೋಕೆ ನಿಮ್ಮ ಅವಧಿಯಲ್ಲಿ ರಾಮನಗರಕ್ಕೆ ಹೋಗಿಲ್ಲ, ಚನ್ನಪಟ್ಟಣಕ್ಕೂ ಹೋಗಿಲ್ಲ. ಕನ್ನಡ ಬಾವುಟ ಹಾರಿಸಲು ಜನರು ನಿಮ್ಮನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು. ಆದರೆ ಒಂದು ದಿನವೂ ಹೋಗಿ ನೀನು ರಾಷ್ಟ್ರಧ್ವಜಕ್ಕೆ ಹಾಗೂ ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ.
ಕ್ಷೇತ್ರದಲ್ಲಿ ಯಾವುದಾದರೂ ಒಂದು ಗುರುತು ಮಾಡೋ ಕೆಲಸ ಮಾಡಿದ್ದಾರೆ ಪ್ಲೀಸ್ ಪಾಯಿಂಟ್ ಔಟ್ ಮಾಡಿ. ಕೆರೆ ಮಾಡಿದ್ದು ಯೋಗೇಶ್, ದುಡ್ಡು ಕೊಟ್ಟಿದ್ದು ನಾನು. ನೀನು ಚೀಪ್ ಮಿನಿಸ್ಟರ್ ಆಗಿದ್ದಾಗಲೇ ಮಾಡಿಲ್ಲ, ಎಂಎಲ್ಎ ಆಗಿದ್ದಾಗ ಬಿಜೆಪಿ ಜೊತೆಗೆ ಸಂಪರ್ಕ ಇತ್ತು. ಸುಮ್ಮನೆ ಓಟಿಗೋಸ್ಕರ ಬಂದು ಮಾತನಾಡೋದಲ್ಲ. ಚನ್ನಪಟ್ಟಣಕ್ಕೆ ನೀನು ಏನು ಕೊಟ್ಟೆ ಅಂತ ಹೇಳಬೇಕು ಎಂದು ಏಕವಚನದಲ್ಲಿಯೇ ಹರಿಹಾಯ್ದರು.
ಯೋಗೀಶ್ಬರ್ ಪಕ್ಷಾಂತರಿ ಒಪ್ತೇನೆ, ಕಾಂಗ್ರೆಸ್, ಬಿಜೆಪಿ ಎಲ್ಲಾ ಕಡೆನೂ ಹೋದ್ರು. ಎನ್ಡಿಎ ಸರಿ ಇಲ್ಲ, ಕುಮಾರಸ್ವಾಮಿ ಸರಿ ಇಲ್ಲ ಅಂತ ಎಂಎಲ್ಸಿ ಸ್ಥಾನ ಬಿಟ್ಟು ನಮ್ಮ ಜೊತೆ ಬಂದಿದ್ದಾರೆ ಎಂದರು.