ಕುಂದಾಪುರ: ಸ್ನೇಹಿತನ ಸಹೋದರಿಯ ಮದುವೆ ಸಮಾರಂಭಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಗೆಳೆಯರ ಜೊತೆಗೆ ಈಜಲು ಹೋದವ ಮೃತಪಟ್ಟಿದ್ದು, ತಾಯಿಗೆ ಊಟಕ್ಕೆ ರೆಡಿ ಮಾಡು ಎಂದು ಹೇಳಿ ಹೆಣವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆ ಬೀಜಾಡಿ ಕಡಲತೀರದಲ್ಲಿ ಶನಿವಾರ ಸಂಭವಿಸಿದೆ.
ಹೌದು, ಯುವಕರ ತಂಡವೊಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಗಳಾದ ಬೆಂಗಳೂರು ಟಿ. ದಾಸರಹಳ್ಳಿ ಮೂಲದ ಸಂತೋಷ್ (25) ಹಾಗೂ ಕುಂದಾಪುರದ ಆನಗಳ್ಳಿ ನಿವಾಸಿ ಅಜಯ್ (25) ಮೃತರು.
ಬಾಲ್ಯದಿಂದಲೂ ಕಲಿಕೆಯಲ್ಲಿ ಮುಂದಿದ್ದ ಅಜಯ್ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ ಮುಗಿಸಿ ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಉದ್ಯೋಗ ಆರಂಭಿಸಿದ್ದರು. ಶುಕ್ರವಾರ ರಾತ್ರಿ ಬ್ರಹ್ಮಾವರದಲ್ಲಿ ಸ್ನೇಹಿತನ ಸಹೋದರಿಯ ಮೆಹಂದಿ ಕಾರ್ಯಕ್ರಮ ಮುಗಿಸಿ ಅಮ್ಮನಿಗೆ ಕರೆ ಮಾಡಿ, ಇಲ್ಲೇ ಸಮೀಪದ ವಸತಿಗೃಹದಲ್ಲಿ ಉಳಿದುಕೊಂಡು ನಾಳೆ (ಶನಿವಾರ) ಮಧ್ಯಾಹ್ನ ವೇಳೆಗೆ ಬರುತ್ತೇವೆ. ಊಟಕ್ಕೆ ತಯಾರಿ ಮಾಡಿ ಇಡು ಎಂದು ಹೇಳಿದ್ದರು. ಬೆಳಗ್ಗೆ ಮಗನಿಗೆ ಅಮ್ಮ ಕರೆ ಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಗ ಮನೆಗೆ ಬರುತ್ತಾನೆಂದು ಸಂಭ್ರಮದಿಂದಲೇ ಮಗನಿಗೆ ಇಷ್ಟವಾದ ಊಟ ತಯಾರಿಸಿ ಕಾಯುತ್ತಿದ್ದ ತಾಯಿಗೆ ಅಜಯ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದು, ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಹಿನ್ನೆಲೆ:
ಸ್ನೇಹಿತ ಅರ್ಜುನ್ ಸಹೋದರಿಯ ಮದುವೆ ಕಾರ್ಯಕ್ರಮಕ್ಕೆಂದು ನಾಲ್ವರು ಸ್ನೇಹಿತರಾದ ಸಂತೋಷ್, ಅಜಯ್, ಮೋಕ್ಷಿತ್ ಹಾಗೂ ಅರ್ಜುನ್ ಶುಕ್ರವಾರ ಬೆಂಗಳೂರಿನಿಂದ ಬಂದಿದ್ದು, ರಾತ್ರಿ ಬ್ರಹ್ಮಾವರದಲ್ಲಿ ಮೆಹಂದಿ ಕಾರ್ಯಕ್ರಮ ಮುಗಿಸಿ ಕುಂದಾಪುರದ ಬೀಜಾಡಿಯಲ್ಲಿರುವ ಬೀಚ್ ಪಕ್ಕದಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ತಂಗಿದ್ದರು. ಶನಿವಾರ ಬೆಳಗ್ಗೆ ನಾಲ್ವರಲ್ಲಿ ಮೂವರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅವರ ಪೈಕಿ ಇಬ್ಬರು ಸಮುದ್ರಪಾಲಾಗಿದ್ದಾರೆ.
ಸ್ನೇಹಿತ ಮೋಕ್ಷಿತ್ ಮುಂದೆ ಹೋಗಬೇಡಿ ಎಂದು ಹೇಳಿದರೂ ಕೇಳದೇ ನೀರಿನಲ್ಲಿ ಮುಂದೆ ಸಾಗಿರುವ ಸಂತೋಷ್ ಹಾಗೂ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಯುವಕರನ್ನು ಮೋಕ್ಷಿತ್ ಹಾಗೂ ಸ್ಥಳೀಯರು ರಕ್ಷಿಸಲು ಮುಂದಾಗಿದ್ದು, ಈ ವೇಳೆ ಸಂತೋಷ್ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಕುಂದಾಪುರ ಮೂಲದ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಸತತ ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಬಿದ್ದ ಸ್ಥಳದಿಂದ ಅನತಿ ದೂರದಲ್ಲೇ ಮೃತದೇಹ ಪತ್ತೆಯಾಗಿದೆ.
ಇತ್ತೀಚೆಗಷ್ಟೇ ತಿಪಟೂರು ಮೂಲದ ಯುವಕನೊಬ್ಬ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನೆನಪು ಮಾಸುವ ಮುನ್ನವೇ ಇದೀಗ ಇನ್ನೊಂದು ದುರ್ಘಟನೆ ಇದೇ ಸ್ಥಳದಲ್ಲಿ ನಡೆದಿದೆ.