ಮೊದಲಿಂದ್ಲೂ ಎಚ್ಡಿಕೆಗೆ ಪುತ್ರ ನಿಖಿಲ್ ಸ್ಪರ್ಧೆ ಮಾಡುವಂತೆ ಮನಸ್ಸಿತ್ತು: ಯೋಗೇಶ್ವರ್‌ ಸ್ಪಷ್ಟನೆ

ಚನ್ನಪಟ್ಟಣ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮೊದಲಿಂದಲೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು ಎಂದಿತ್ತು. ಅದಕ್ಕಾಗಿ ತಂತ್ರಗಾರಿಕೆ ಮಾಡುತ್ತಿದ್ದರು. ನಾನು ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧೆಗೆ ಒಪ್ಪಿದರೂ ಅವರು ಅವಕಾಶ ನೀಡಲ್ಲ ಎಂಬುದು ಅರ್ಥ…

ಚನ್ನಪಟ್ಟಣ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮೊದಲಿಂದಲೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು ಎಂದಿತ್ತು. ಅದಕ್ಕಾಗಿ ತಂತ್ರಗಾರಿಕೆ ಮಾಡುತ್ತಿದ್ದರು. ನಾನು ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧೆಗೆ ಒಪ್ಪಿದರೂ ಅವರು ಅವಕಾಶ ನೀಡಲ್ಲ ಎಂಬುದು ಅರ್ಥ ಆಗಿತ್ತು ಎಂದು ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರ ನಡವಳಿಕೆ ನೋಡಿ ಯಾವುದೇ ಕಾರಣಕ್ಕೂ ಅವರು ನನಗೆ ಟಿಕೆಟ್ ನೀಡಲ್ಲ ಎಂದು ಮನವರಿಕೆ ಆಗಿತ್ತು. ಅವರು ಹಿಂದೆ ಆಡುತ್ತಿದ್ದ ಮಾತುಗಳಿಂದ ನಾನು ಜೆಡಿಎಸ್ ಚಿಹ್ನೆಯಿಂದಲೇ ಸ್ಪರ್ಧೆಗೆ ಒಪ್ಪಿದರೂ ಅವಕಾಶ ನೀಡುವುದಿಲ್ಲ ಎಂಬುದು ಅರ್ಥವಾಗಿತ್ತು ಎಂದರು.

ಚನ್ನಪಟ್ಟಣದ ವಿಚಾರ ಬಂದಾಗಲೆಲ್ಲ ಇನ್ನೂ ಸಮಯ ಇದೆಯಲ್ಲ, ಚನ್ನಪಟ್ಟಣ ಇಲ್ಲೇ ಇದೆಯಲ್ಲ ಎಂದು ಕುಹಕವಾಡುತ್ತಿದ್ದರು. ನನ್ನನ್ನು ವ್ಯಂಗ್ಯವಾಗಿ ಮಾತನಾಡಿಸುತ್ತಿದ್ದರು ಎಂದರು.

Vijayaprabha Mobile App free

ಪುತ್ರನ ನಿಲ್ಲಿಸಲು ತಂತ್ರಗಾರಿಕೆ: ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಲು ತಂತ್ರಗಾರಿಕೆ ಮಾಡುತ್ತಿದ್ದರು. ಅದನ್ನು ಈ ತಾಲೂಕಿನ ಜನ ಒಪ್ಪುತ್ತಿರಲಿಲ್ಲ. ಅದಕ್ಕೆ ಅವರು ತಾಲೂಕಿನ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಸಭೆ ಕರೆಯುವುದು, ಅಳುವುದು, ಏನೇನೋ ಹೇಳುವುದು ಮಾಡುತ್ತಿದ್ದರು. ಈಗ ಅಂತಿಮವಾಗಿ ತಮ್ಮ ಆಸೆಯಂತೆ ಪುತ್ರನನ್ನೇ ಕಣಕ್ಕಿಳಿಸಿದ್ದಾರೆ. ಇದು ಅವರ ಕುಟುಂಬ, ಪಕ್ಷದ ವಿಚಾರ. ನನಗೆ ಆ ವಿಚಾರ ಮಾತನಾಡಲು ಇಷ್ಟವಿಲ್ಲ ಎಂದರು.

ನನಗೆ ಅನ್ಯಾಯವಾಗಿರುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಟಿಕೆಟ್‌ ಕೊಟ್ಟಿದ್ದರೆ ನಾನು ಯಾಕೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದ ಅವರು, ಒಂದೆರಡು ದಿನ ವಿಳಂಬ ಆಗಿದ್ದರೆ ನನ್ನ ಸ್ಥಿತಿ ಅತಂತ್ರ ಆಗುತ್ತಿತ್ತು. ನ್ಯಾಯಯುತವಾಗಿ ನನಗೆ ಮೈತ್ರಿ ಟಿಕೆಟ್ ಸಿಗಬೇಕಿತ್ತು. ಅದನ್ನು ಕೊಡದೆ ಅನ್ಯಾಯ ಮಾಡಿದರು. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು

ಟಿಕೆಟ್ ನೀಡಲು ಎಚ್ಡಿಕೆಗೆ ಇಷ್ಟವಿರಲಿಲ್ಲ:

ಯೋಗೇಶ್ವರ್‌ಗೆ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಲು ಹೇಳಿದ್ದೇನೆಂದು ಯಾವತ್ತೂ ಬಹಿರಂಗವಾಗಿ ಹೇಳಿಯೂ ಇಲ್ಲ. ಕಾಂಗ್ರೆಸ್‌ ಸೇರುವ ಮೊದಲು ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸುತ್ತೇನೆಂದು ಪ್ರಾಮಾಣಿಕವಾಗಿ ಕೇಳಿದ ಸಂದರ್ಭದಲ್ಲೂ ಮನಃಪೂರ್ವಕವಾಗಿ ಟಿಕೆಟ್ ನೀಡಲು ಅವರಿಗೆ ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾರೆ. ನಾನು ಮತ್ತು ಡಿ.ಕೆ.ಶಿವಕುಮಾರ್ ರಾಜಕೀಯ ವಿಚಾರಕ್ಕೆ ಹೋರಾಟ ಮಾಡಿದ್ದೇವೆ. ಆದರೆ ನಾವಿಬ್ಬರೂ ಒಂದೇ ಜಿಲ್ಲೆಯವರು, ಅಭಿವೃದ್ಧಿ ವಿಚಾರಕ್ಕೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಇಲ್ಲಿ ಹೊರಗಿನವರ ಕಾಟ ಹೆಚ್ಚಾಗಿತ್ತು. ಈಗ ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.