ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇದೀಗ ಕರ್ನಾಟಕ ಸರ್ಕಾರವು ಗೋವಾ ಮಾದರಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮುಂದಾಗಿದೆ. ಗೋವಾದಲ್ಲಿರುವಂತೆ ರಾಜ್ಯದ ಕಡಲತೀರಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಮಂಗಳೂರಿನಲ್ಲಿ ನಡೆದ ‘ಕನೆಕ್ಟ್ 2024’ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜೇಂದ್ರ ಕೆ.ವಿ. ಮಾತನಾಡುತ್ತಾ, ರಾಜ್ಯ ಸರ್ಕಾರವು ಪ್ರವಾಸಿಗರನ್ನು ಸೆಳೆಯಲು ನಮ್ಮಲ್ಲಿನ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಲು ಪ್ರಸ್ತಾಪಿಸಿದ್ದು, ಇದರಲ್ಲಿ ರಾಜ್ಯದ ಕಡಲತೀರಗಳಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ಇರುವ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಕುರಿತು ಚಿಂತಿಸಲಾಗಿದೆ. ಇದರಿಂದ ಗೋವಾ ರಾಜ್ಯದಂತೆ ಕರ್ನಾಟಕಕ್ಕೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಲಿದೆ ಎಂದರು.
ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದರ ಜೊತೆಗೆ, ಕಡಲತೀರಗಳಲ್ಲಿ ರಾತ್ರಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವುದು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸುವುದರಿಂದ ಜನರು ರಾತ್ರಿ ವೇಳೆ ಬೀಚ್‌ಗಳಲ್ಲಿ ಹೆಚ್ಚು ಸಮಯ ಕಳೆಯಲು ಉತ್ತೇಜನ ನೀಡಿದಂತಾಗಲಿದೆ. ಹಾಗೂ ಪ್ರವಾಸೋದ್ಯಮ ಯೋಜನೆಗಳಿಗೆ ಕರಾವಳಿ ನಿಯಂತ್ರಣ ವಲಯದಂತಹ ಅನುಮತಿಗಳನ್ನು ಶೀಘ್ರದಲ್ಲಿ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು. ಹೊಸ ಪ್ರವಾಸೋದ್ಯಮ ನೀತಿಯು ಕರಾವಳಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ನಿರ್ದಿಷ್ಟ ಮಾರ್ಗಸೂಚಿಗಳನ್ನು ಒಳಗೊಂಡಿರಲಿದೆ ಎಂದು ಅವರು ಹೇಳಿದರು.
ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಬೀಚ್‌ಗಳಿಗೆ ರಾತ್ರಿ ಪ್ರವೇಶ ಸಮಯವನ್ನು ಹೆಚ್ಚಳ ಮಾಡಬೇಕಿದೆ. ಮಂಗಳೂರು ನಗರದಲ್ಲಿ ಈಗಾಗಲೇ ರೆಸ್ಟೋರೆಂಟ್ ಮತ್ತು ಪರವಾನಗಿ ಪಡೆದ ಉದ್ಯಮಗಳಿಗೆ ರಾತ್ರಿ 1 ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ ಬೀಚ್‌ಗಳಿಗೆ ಕೇವಲ 9 ಗಂಟೆಯವರೆಗೆ ಮಾತ್ರ ಪ್ರವೇಸಕ್ಕೆ ಅವಕಾಶವಿದ್ದು, ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಈ ಸಮಯವನ್ನು ವಿಸ್ತರಣೆ ಮಾಡಲಾಗುವುದು ಎಂದರು.




