ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. ಮಳೆಗೆ ಮನೆಯೊಂದರ ಗೋಡೆ ಕುಸಿದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಗುಬ್ಬಿ ತಾಲ್ಲೂಕಿನ ಜಿ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಹನಾ(27) ಮೃತ ದುರ್ದೈವಿ ಮಹಿಳೆಯಾಗಿದ್ದಾಳೆ.
ಜಿ ಹೊಸಹಳ್ಳಿ ಗ್ರಾಮದ ಸಹನಾ ಸ್ನಾನ ಮಾಡುವ ನಿಟ್ಟಿನಲ್ಲಿ ತಮ್ಮ ಹಳೆಯ ಮನೆ ಬಳಿ ತೆರಳಿದ್ದಾಳೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಒದ್ದೆಯಾಗಿದ್ದ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದ್ದು ಸಹನಾ ಗೋಡೆಯ ಮಣ್ಣಿನಡಿ ಸಿಲುಕಿದ್ದರು. ಕೂಡಲೇ ಸ್ಥಳೀಯರು ದೌಡಾಯಿಸಿ ಮಣ್ಣಿನಡಿ ಸಿಲುಕಿದ್ದ ಸಹನಾಳನ್ನು ಹೊರತೆಗೆದಿದ್ದು ಗುಬ್ಬಿ ತಾಲ್ಲೂಕಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಈ ವೇಳೆಗಾಗಲೇ ಆಸ್ಪತ್ರೆಗೆ ಸಾಗುವ ಮಾರ್ಗ ಮಧ್ಯೆಯೇ ಸಹನಾ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಗುಬ್ಬಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.