ತಿರುವನಂತಪುರ (ಕೇರಳ): ಯಾರೇ ಆಗಲಿ ‘ಮಕ್ಕಳ ಎದುರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಥವಾ ಬೆತ್ತಲಾಗಿ ನಿಲ್ಲುವುದು ಆ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದಂತೆ’ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವ್ಯಕ್ತಿಯೋರ್ವ ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ಮತ್ತು ಬಾಲಾಪರಾಧಿ ಕಾಯ್ದೆ (IPC, POCSO) ಕೇಸ್ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿ ವಿಚಾರಣೇ ನಡೆಸಿದ ಕೇರಳ ಹೈಕೋರ್ಟಿನ ನ್ಯಾಯಮೂರ್ತಿ ಎ. ಬದರುದ್ದೀನ್ ಅವರಿದ್ದ ಪೀಠ, ‘ಕೊಠಡಿಯ ಬಾಗಿಲು ಹಾಕಿಕೊಳ್ಳದೆ, ಬೆತ್ತಲಾಗಿ ಲೈಂಗಿಕ ಕ್ರಿಯೆ ಮಾಡುವಾಗ ಮಕ್ಕಳು ಒಳಗೆ ಬಂದರೆ ಅದು ಮಕ್ಕಳ ತಪ್ಪಲ್ಲ’ ಎಂದು ವ್ಯಾಖ್ಯಾನಿಸಿದೆ.
ಮಕ್ಕಳ ಎದುರು ಲೈಂಗಿಕ ಸಂಭೋಗ ಅಥವಾ ಬೆತ್ತಲೆ ದೇಹವನ್ನು ಪ್ರದರ್ಶಿಸುವುದು ಸಹ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಂತೆ. ಹೀಗಾಗಿ ಅವು ಪೋಕ್ಸೋ, ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಅಭಿಪ್ರಾಯಪಟ್ಟಿತು. ಆದ್ದರಿಂದ ಪೋಕ್ಸೋ ಪ್ರಕರಣದಲ್ಲಿ ವ್ಯಕ್ತಿ ತನಿಖೆಗೆ ಒಳಪಡುವಂತೆ ಆದೇಶ ನೀಡಿದೆ.
ಪ್ರಕರಣ ಹಿನ್ನೆಲೆ:
ಕೊಠಡಿಗೆ ಬೀಗ ಹಾಕದೆ ಲಾಡ್ಜ್‌ವೊಂದರಲ್ಲಿ ಅಪ್ರಾಪ್ತ ಬಾಲಕನ ತಾಯಿಯೊಂದಿಗೆ ಒಬ್ಬ ವ್ಯಕ್ತಿ ಲೈಂಗಿಕ ಸಂಭೋಗ ನಡೆಸುತ್ತಿದ್ದ. ಇದೇ ವೇಳೆ ಏಕಾಏಕಿ ಆ ಬಾಲಕ ಒಳಗೆ ಪ್ರವೇಶಿಸಿದ್ದು, ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಬಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯು ಸುಮ್ಮನಿದ್ದಳು. ಹಾಗಾಗಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗ ಆ ವ್ಯಕ್ತಿ ಕೇಸ್ ರದ್ದು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದ್ದು ತನಿಖೆ ನಡೆಯಲಿ ಎಂದು ಆದೇಶಿಸಿದೆ.