ಕರ್ನೂಲ್: ಸ್ವ ಪಕ್ಷದ ಹಾಲಿ ಶಾಸಕ ಡಾ.ಪಿ.ವಿ.ಪಾರ್ಥಸಾರಥಿ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡಿದ್ದ ಆಂಧ್ರದ ಕರ್ನೂಲ್‌ನ ಆದೋನಿಯ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಪ್ರಕಾಶ್ ಜೈನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
1983ರಲ್ಲಿ ತೆಲುಗು ದೇಶಂ ಪಕ್ಷದ ಅಡಿಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಜೈನ್ ಅವರು ನಂತರ ಬಿಜೆಪಿ ಸೇರಿದ್ದರು. ಇತ್ತೀಚೆಗೆ ಪಾರ್ಥಸಾರಥಿ ಅವರ ಮೇಲೆ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪ ಮಾಡಿದ್ದರು. ಅಲ್ಲದೇ, ಇದೇವೇಳೆ ತಾವು ಬಿಜೆಪಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ, ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಬೆಂಬಲ ನೀಡುವುದಾಗಿಯೂ ತಿಳಿಸಿದ್ದರು.
ಪಕ್ಷದಲ್ಲೇ ಇದ್ದು ಸ್ವಪಕ್ಷದ ಶಾಸಕರ ಬಗ್ಗೆ ಆರೋಪ ಮಾಡಿರುವ ಕಾರಣ ಈ ಬಗ್ಗೆ ಬಿಜೆಪಿಯು ಜೈನ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಆದರೆ ಅದಕ್ಕೆ ಅವರು ಪ್ರತಿಕ್ರಿಯಿಸಲು ವಿಫಲರಾಗಿದ್ದರು. ಇದರಿಂದ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ರಾಜ್ಯ ಶಿಸ್ತು ಸಮಿತಿ ಅವರನ್ನು ಅಮಾನತುಗೊಳಿಸಿದೆ.