ಹೈದರಾಬಾದ್: ಬಂದೋಬಸ್ತ್ ಕರ್ತವ್ಯಕ್ಕೆ ಹಾಜರಾಗಿಲ್ಲವೆಂದು ಆರೋಪಿಸಿ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ತಮಗೆ ಅವಮಾನ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೇಡಕ್ ಜಿಲ್ಲೆಯ ಚಿಲಿಪ್‌ಚೆಡ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರಿಗೆ ಮಹಿಳಾ ಎಎಸ್ಐ ಅವರ ಸಹೋದರ ದೂರು ನೀಡಿದ್ದಾರೆ. ನನ್ನ ಸಹೋದರಿಯನ್ನು ದುರ್ಬಳಕೆ ಮಾಡಿಕೊಳ್ಳಲು ಎಸ್ಐ ನೀಡಿದ ಚಿತ್ರಹಿಂಸೆಯನ್ನು ಸಹಿಸಲಾಗದೆ ತನ್ನ ಜೀವನವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಾಳೆ ಎಂದು ಹೇಳಿದ್ದಾರೆ.
ಪ್ರತಿ ವಿಚಾರಕ್ಕೂ ಎಸ್ಐ ಆಕೆಗೆ ಹಿಂಸೆ ನೀಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಸಹೋದ್ಯೋಗಿಗಳ ಮುಂದೆ ನನ್ನ ಸಹೋದರಿಗೆ ಅವಮಾನಿಸಿದ್ದಾರೆ. ಬಂದೋಬಸ್ತ್ ಕರ್ತವ್ಯ ಮಾಡಿದ ನಂತರವೂ ಗೈರುಹಾಜರಾಗಿದ್ದರೆಂದು ಆರೋಪಿಸಿದ್ದಾರೆ. ಆಕೆ ಅವರಿಗೆ ಸಮಜಾಯಿಷಿ ನೀಡಲು ಮುಂದಾದರೂ ಒಪ್ಪದೇ ಕಿರುಕುಳ ನೀಡುತ್ತಲೇ ಇದ್ದರು. ಬೇರೆ ದಾರಿಯಿಲ್ಲದೆ ಪೊಲೀಸ್ ಠಾಣೆಯಲ್ಲೇ ಜೀವನ ಅಂತ್ಯಗೊಳಿಸಲು ಆಕೆ ಯತ್ನಿಸಿದ್ದಾಳೆ ಎಂದಿದ್ದಾರೆ.
ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಎಎಸ್ಐನ್ನು ಸಹೋದ್ಯೋಗಿಗಳೇ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ.