ಬೆಂಗಳೂರು: ಪಂಚ ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತಂದು ಯಶಸ್ವಿಯಾಗಿರುವ ರಾಜ್ಯ ಸರ್ಕಾರ, ಮತ್ತೊಂದು ಹೊಸ ಹೆಜ್ಜೆ ಇರಿಸಿದೆ. ಮಹಿಳೆಯರಿಗೆ ದಸರಾ ಹಬ್ಬದಂದು ಹೊಸ ಸುದ್ದಿಯನ್ನ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ನೀಡಿದ್ದಾರೆ.
ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡಲು ರಾಜ್ಯಾದ್ಯಂತ ಮಹಿಳೆಯರೇ ನಡೆಸುವ 50 ʼಅಕ್ಕ ಕೆಫೆ – ಬೇಕರಿʼ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಸ್ವಸಹಾಯ ಗುಂಪುಗಳ ಮಹಿಳೆಯರು ಈ ಕೆಫೆಯನ್ನು ನಡೆಸಲಿದ್ದು, ಇಲ್ಲಿ ಆರೋಗ್ಯಕರ, ಸ್ವಾದಿಷ್ಟ ಆಹಾರ ಲಭ್ಯವಿರಲಿದೆ. ಶುಚಿ-ರುಚಿ ಜತೆಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಆಹಾರ ಪೂರೈಸಲಾಗುವುದು. ಅಕ್ಕ ಕೆಫೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಾರವಿಡೀ ಕಾರ್ಯನಿರ್ವಹಿಸಲಿದೆ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಕರ್ನಾಟಕ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಜ್ಯದಲ್ಲಿಯೇ ಎರಡನೇ ಅಕ್ಕ ಕೆಫೆ-ಬೇಕರಿಯನ್ನ ದೇವನಹಳ್ಳಿಯಲ್ಲಿ ಉದ್ಘಾಟಿಸಿ ಹೇಳಿದ್ದಾರೆ.