ಬಳ್ಳಾರಿ,ಸೆ.05:ಭವಿಷ್ಯದ ದೇಶ ಕಟ್ಟಲು ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಬೇಕೆಂದರೆ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ರವರ 136 ನೇ ಜನ್ಮದಿನಾಚರಣೆ ಅಂಗವಾಗಿ ನಗರದ ನಲ್ಲಚೇರುವು ಪ್ರದೇಶದ ಜಿಲ್ಲಾ ಕ್ರೀಡಾಂಗಣ ರಸ್ತೆಯ ಮಹರ್ಷಿ ಶ್ರೀ ವಾಲ್ಮೀಕಿ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಿಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ದೇಶದ ಭವಿಷ್ಯ ಅರಳುವುದು ನಾಲ್ಕು ಗೋಡೆಗಳ ಮಧ್ಯದ ಮಕ್ಕಳ ಶಿಕ್ಷಣದಲ್ಲಿ. ಶಿಕ್ಷಕರು ದೈವ ಸ್ವರೂಪಿಗಳು. ದೇಶದ ಅಭಿವೃದ್ಧಿಯ ಪಥ ಶಿಕ್ಷಕರ ಕೈಯಲ್ಲಿದೆ, ಅವರ ಮಾರ್ಗದರ್ಶನದ ಪ್ರೇರಣೆಯಿಂದ ಮಾತ್ರ ಮನುಷ್ಯನು ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯ ಎಂದರು. ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಸಂಬAಧಿಸಿದAತೆ, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಶಿಕ್ಷಕರು ಮಕ್ಕಳನ್ನು ಕೂಡ ತಮ್ಮ ಮಕ್ಕಳಂತೆ ಭಾವಿಸಿ ಶಿಕ್ಷಣ ನೀಡುವುದು ಶ್ಲಾಘನೀಯ ಕಾರ್ಯವಾಗಿದೆ. ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯಲು ಶಿಕ್ಷಕರ ಶ್ರಮ ಪ್ರಮುಖವಾದುದು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಬಿ.ಉಮಾದೇವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಗಳನ್ನು ವಿಶಿಷ್ಟ ಹಾಗೂ ಆದರ್ಶ ದಿನವನ್ನಾಗಿ ಆಚರಿಸಲಾಗುತ್ತದೆ. ಅದರಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಸವಿನೆನಪಿಗಾಗಿ ಶಿಕ್ಷಕರ ದಿನಾಚರಣೆ ಮತ್ತು ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ 1 ರಿಂದ 7 ತರಗತಿ ವಿದ್ಯಾರ್ಥಿಗಳಿಗೆ ‘ಕಲಿಕಾ ಆಂದೋಲನ’ ಕಾರ್ಯಕ್ರಮದಡಿ ಶಿಕ್ಷಕರಿಗೆ ಕಾರ್ಯಗಾರ ನಡೆಸಿ, ಕಠಿಣ ವಿಷಯಗಳ ಅರ್ಥೈಸುವಿಕೆ ಕುರಿತು ಕಾರ್ಯಯೋಜನೆ ಕೈಗೊಳ್ಳಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸಲು ಶಿಕ್ಷಕರರು ಶ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಸ್ತುತದಲ್ಲಿನ ಶಿಕ್ಷಣದ ಸವಾಲುಗಳನ್ನು ಎದುರಿಸಿ, ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಬೇಕು. ಮಕ್ಕಳನ್ನು ಮುಖ್ಯವಾಹಿನಿಗೆ ತರಲು ನೈತಿಕ ಮೌಲ್ಯಗಳು, ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಕೆಪಿಎಸ್‌ನ ಸಮಾಜಶಾಸ್ತç ಉಪನ್ಯಾಸಕರಾದ ಡಾ.ಯು. ಶ್ರೀನಿವಾಸಮೂರ್ತಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ದೀಪ(ಹಣತೆ) ತಾನು ಉರಿದು ಬೆಳಕು ನೀಡುತ್ತದೆ, ಅದೇರೀತಿಯಾಗಿ ಶಿಕ್ಷಕರು ತಾವು ಶ್ರಮಪಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಆದರ್ಶ ಜೀವನ ರೂಪಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾಜಿರಾವ್ ಸೇರಿದಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ 13 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಿರಿಯ ಪ್ರಾಥಮಿಕ ಶಾಲೆ ವಿಭಾಗ:
ಬಳ್ಳಾರಿ ಪೂರ್ವ ವಲಯ ಬಾಲಯ್ಯ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹಾಂತೇಶ ಮೇಟಿ, ಕುರುಗೋಡು ತಾಲ್ಲೂಕಿನ ಕರಿಮಾರೆಮ್ಮ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊನ್ನುರ್.ಬಿ., ಸಂಡೂರು ತಾಲ್ಲೂಕಿನ ಸೋವೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಮಾರಸ್ವಾಮಿ.ಎಲ್., ಸಿರುಗುಪ್ಪ ತಾಲ್ಲೂಕಿನ ದೇವಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಫಕ್ರುದ್ದೀನ್ ಸಾಹೇಬ್.ಪಿ.
ಹಿರಿಯ ಪ್ರಾಥಮಿಕ ಶಾಲೆ ವಿಭಾಗ:
ಬಳ್ಳಾರಿ ಪೂರ್ವ ವಲಯ ಬೈಲೂರಿನ ಹಿರಿಯ ಪ್ರಾಥಮಿಕ ಶಾಲೆಯ ವಿ.ತ್ರಿವೇಣಿ, ಕುರುಗೋಡು ತಾಲ್ಲೂಕಿನ ವ್ಯಾಪ್ತಿಯ ಎಸ್‌ಡಬ್ಲ್ಯೂಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗವಿಸಿದ್ದಪ್ಪ, ಸಂಡೂರು ತಾಲೂಕಿನ ಎಂ.ತುAಬರಗುದ್ದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರ್ಚನಾ.ಕೆ., ಸಿರುಗುಪ್ಪ ತಾಲೂಕಿನ ಅರಳಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರೆಪ್ಪ.ಸಿ.ಡಿ., ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಮೆಟ್ರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೆ.ಎನ್.ಮಲ್ಲಿಕಾರ್ಜುನ.
ಪ್ರೌಢ ಶಾಲೆ ವಿಭಾಗ:
ಬಳ್ಳಾರಿ ಪೂರ್ವ ವಲಯದ ಕೆ.ವೀರಾಪುರದ ಸರ್ಕಾರಿ ಪ್ರೌಢ ಶಾಲೆಯ ಟಿ.ಜಿ.ನಾಗರಾಜ, ಕುರುಗೋಡು ಇಂದಿರಾನಗರದ ಸರ್ಕಾರಿ ಪ್ರೌಢ ಶಾಲೆಯ ಶ್ರೀಲತಾ.ಪಿ., ಸಂಡೂರು ತಾಲೂಕಿನ ಸಂಡೂರು ಎಪಿಎಂಸಿ ಸರ್ಕಾರಿ ಪ್ರೌಢ ಶಾಲೆಯ ಭಾಷಾ ಮೆಹಬೂಬ, ಸಿರುಗುಪ್ಪ ತಾಲೂಕಿನ ಕುರಿವಳ್ಳಿ ಸರ್ಕಾರಿ ಪ್ರೌಢ ಶಾಲೆಯ ಸಂತೋಷ್.ಆರ್. ಬಳಿಕ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.