ದುಬೈ: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್ ಓವರ್ ಮೂಲಕ ರೋಚಕ ಗೆಲುವು ದಾಖಲಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ 201 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ, ಇಶಾನ್ ಕಿಶನ್ (99 ರನ್, 58 ಎಸೆತ), ಕಿರಣ್ ಪೊಲಾರ್ಡ್ (60 ರನ್, 34 ಎಸೆತ), ಅವರ ಅಮೋಘ ಪ್ರದರ್ಶನದಿಂದ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ ರೋಚಕ ಪಂದ್ಯವನ್ನು ಟೈ ಮಾಡಿಕೊಂಡಿತು.
ನಂತರ ಮುಂಬೈ ಇಂಡಿಯನ್ಸ್ ಸೂಪರ್ ಓವರ್ ನಲ್ಲಿ ಆರ್ ಸಿಗೆ 8 ರನ್ ಗಳ ಸವಾಲ್ ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ 5 ರನ್ ಮತ್ತು ಡಿವಿಲಿಯರ್ಸ್ 6 ರನ್ ಗಳಿಸಿ ತಂಡಕ್ಕೆ ಸುಲಭ ಜಯ ತಂದು ಕೊಟ್ಟರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಉಸಿರು ಉದಾನ 2, ಚಾಹಲ್, ಜಂಪಾ, ಸುಂದರ್ ತಲಾ ವಿಕೆಟ್ ಪಡೆದು ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡ ಆರಂಭಿಕ ಆಟಗಾರ ಅರೋನ್ ಫಿಂಚ್ ( 52 ರನ್, 35 ಎಸೆತ), ಎಬಿಡಿ ಡಿವಿಲಿಯರ್ಸ್ ( 55 ರನ್ 24 ಎಸೆತ ) ದೇವದತ್ ಪಡಿಕ್ಕಲ್ (54 ರನ್, 44 ಎಸೆತ) ಭರ್ಜರಿ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. ಮುಂಬೈ ಇಂಡಿಯನ್ ಪರ ಟ್ರೆಂಟ್ ಬೋಲ್ಟ್ 2, ಚಾಹರ್ ಒಂದು ವಿಕೆಟ್ ಪಡೆದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಎಬಿಡಿ ವಿಲಿಯರ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.