ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣನನ್ನು (Suraj Revanna Case) ಮತ್ತೆ ಎರಡು ದಿನ ಸಿಐಡಿ ಕಸ್ಟಡಿಗೆ ನೀಡಲು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಆದೇಶ ನೀಡಿದ್ದಾರೆ. ಮತ್ತೊಂದೆಡೆ ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ವಕೀಲ ದೇವರಾಜೇಗೌಡಗೆ ಜಾಮೀನು ಸಿಕ್ಕಿದೆ.
ಯುವಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಅರೋಪದಡಿ ದಾಖಲಾದ ಪ್ರಕರಣದಲ್ಲಿ ಜೂನ್ 22ರಂದು ಸೂರಜ್ ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು. ನಂತರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 8 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದು ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಸೂರಜ್‌ನ ಹಾಜರುಪಡಿಸಲಾಗಿತ್ತು. ಹೀಗಾಗಿ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್ ಸೂರಜ್‌ಗೆ ಜುಲೈ 3ರವರೆಗೆ ಕಸ್ಟಡಿ ವಿಸ್ತರಿಸಿದೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆ ಮತ್ತೆ ಆರು ದಿನ ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಅಶೋಕ್ ನಾಯಕ್ ಮನವಿ ಮಾಡಿದರು. ವಾಯ್ಸ್ ಸ್ಯಾಂಪಲ್ಸ್ ಸಂಗ್ರಹ ಮಾಡಬೇಕಿದೆ, ಪ್ರತಿನಿತ್ಯ ಏನೆಲ್ಲಾ ತನಿಖೆ ನಡೆದಿದೆ, ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಎಂಟು ದಿನ ಕಸ್ಟಡಿಯಲ್ಲಿದ್ದಾಗ ಏನಾದೂ ತೊಂದರೆ ನೀಡಿದರಾ ಎಂದು ಸೂರಜ್‌ಗೆ ಜಡ್ಜ್ ಪ್ರಶ್ನೆ ಕೇಳಿದರು. ಯಾವುದೇ ತೊಂದರೆ ನೀಡಿಲ್ಲ ಎಂದು ಸೂರಜ್ ಉತ್ತರಿಸಿದ್ದಾರೆ. ಬಳಿಕ 2 ದಿನ ಕಸ್ಟಡಿ ವಿಸ್ತರಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.