ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು ಎಲ್ಲಾ ರಾಜಕೀಯ ನಾಯಕರು ಪ್ರಚಾರವನ್ನು ಜೋರಾಗಿ ನಡೆಸುತ್ತಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ವಿವಿಧ ಗಿಫ್ಟ್ಗಳು, ಭಾಗ್ಯಗಳನ್ನು ಘೋಷಿಸುತ್ತಿದ್ದಾರೆ.
ಹೌದು, ರಾಜ್ಯ ಬಿಜೆಪಿ ನಾಲ್ಕು ದಿಕ್ಕಿನಿಂದ ಹೀಗಾಗಲೇ ವಿಜಯ ಸಂಕಲ್ಪ ರಥಯಾತ್ರೆ ಪ್ರಾರಂಭಿಸಿದ್ದು, ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲು ಕೇಂದ್ರ ನಾಯಕರು ರಾಜ್ಯಕ್ಕೆ ಬಂದು ಹೋಗಿದ್ದು, ಶತಾಯಗತಾಯ ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ಸುತ್ತುತ್ತಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಎರಡು ಬಾರಿ ಬಂದು ಹೋಗಿದ್ದು, ಅದರಂತೆ ಈಗ ಮತ್ತೆ ಮಾರ್ಚ್ 12ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಲಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮ ವಸತಿ ಶಾಲೆ ಮೈದಾನದಲ್ಲಿ ನಡೆಯುವ 53 ಸಾವಿರ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳುಲಿದ್ದು, ದಾವಣಗೆರೆ, ವಿಜಯನಗರ, ಗದಗ, ಧಾರವಾಡ ಸೇರಿದಂತೆ 12 ಜಿಲ್ಲೆಗಳ 53 ಸಾವಿರ ಫಲಾನುಭವಿಗಳು ಸಮಾವೇಶದಲ್ಲಿ ಸೇರುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಅಮಿತ್ ಶಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಪ್ರಮುಖರು ಸಾಥ್ ನೀಡಲಿದ್ದಾರೆ.