ASIA CUP: ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 40 ರನ್ ಗೆಲುವು ಸಾಧಿಸಿದ್ದು, ಈ ಮೂಲಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿ ಸೂಪರ್ 4ರ ಹಂತಕ್ಕೆ ಎಂಟ್ರಿಕೊಟ್ಟಿದೆ.
ಭಾರತ ನೀಡಿದ್ದ 193 ರನ್ ಗುರಿ ಬೆನ್ನಟ್ಟಿದ ಎದುರಾಳಿ ಹಾಂಗ್ ಕಾಂಗ್ ತಂಡ, 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್ ಮಾತ್ರ ಗಳಿಸಲಷ್ಟೇ ಶಕ್ತವಾಗಿ 40 ರನ್ಗಳಿಂದ ಸೋಲನುಭವಿಸಿತು. ಹಾಂಗ್ ಕಾಂಗ್ ಪರ ಬಾಬರ್ ಹಯಾತ್ 41, ಕಿಂಚಿತ್ ಶಾ 30, ಜೀಶನ್ ಅಲಿ 26 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಹಾಗೂ ಆವೇಶ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.
ಇನ್ನು, ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ, 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 192 ರನ್ ಗಳಿಸಿತು. ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಸಿಕ್ಸರ್ ಬಾರಿಸಲು ಹೋಗಿ 21 ರನ್ ಗಳಿಸಿದ್ದಾಗ ಔಟಾದರು. ವಿರಾಟ್ ಕೊಹ್ಲಿ 59 ರನ್ ಹಾಗೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 68 ರನ್ ಗಳಿಸಿದರು. ಹಾಂಗ್ ಕಾಂಗ್ ಪರ ಆಯುಷ್ ಶುಕ್ಲಾ, ಮೊಹಮ್ಮದ್ ಘಜನ್ಫರ್ ತಲಾ ಒಂದು ವಿಕೆಟ್ ಪಡೆದರು.
ಇನ್ನು, ಟೀಮ್ ಇಂಡಿಯಾ ಪರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಸೂರ್ಯ ಕುಮಾರ್ ಯಾದವ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.