ದಾವಣಗೆರೆ ಆ.22:ದೇಶದ ಕಾಡು, ವನ್ಯಜೀವಿ, ನದಿಗಳು ಸೇರಿದಂತೆ ನಮ್ಮ ಸುತ್ತಲಿನ ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ್ ಅರಸುರವರ 107 ನೇ ಜನ್ಮ ದಿನದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಸುತ್ತಲಿನ ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಕಾಳಜಿ ತೋರಬೇಕು. ಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಸರ ಕಾಳಜಿ ಬಗ್ಗೆ ಬೋಧಿಸಬೇಕು. ಆಗ ಮಾತ್ರ ಸ್ವಚ್ಛ ಮತ್ತು ಆರೋಗ್ಯಕರ ಸಮಾಜ ಸೃಷ್ಟಿಸಲು ಸಾಧ್ಯ. ಆಧುನಿಕತೆ ಬೆಳೆದಂತೆ ಪರಿಸರದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಹಿಂದೆ ಹಳ್ಳ-ಕೊಳ್ಳಗಳಲ್ಲಿ ಹರಿಯುವ ನೀರಿನಿಂದ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ದೊರೆಯುತ್ತಿತ್ತು. ಪ್ರಸ್ತುತ ಹಳ್ಳ ಕೊಳ್ಳಗಳು ಸಹ ನಶಿಸುತ್ತಿವೆ. ಇದರಿಂದಾಗಿ ಪ್ರಕೃತಿ ವಿಕೋಪ ಪ್ರವಾಹದಂತ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿವೆ ಎಂದರು.
ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಗಿಡಗಳನ್ನು ನೆಡಬೇಕು. ಪರಿಸರದಲ್ಲಿ ಮನುಷ್ಯರಂತೆ ಪ್ರಾಣಿ ಪಕ್ಷಿಗಳು ಸಹ ಬದುಕುತ್ತಿವೆ, ಅವುಗಳಿಗೆ ಆಹಾರ ಒದಗಿಸಲು ಹಣ್ಣಿನ ಮರಗಳನ್ನು ಹಾಕಿದಾಗ ಅವುಗಳು ಕೂಡ ಆ ಮೂಲಕ ಆಹಾರ ಪಡೆದು ಬದುಕುತ್ತವೆ ಎಂದು ತಿಳಿಸಿದರು.
ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶೇಖರ್ ಮಾತನಾಡಿ, ದೇವರಾಜ್ ಅರಸ್ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನದೊಂದಿಗೆ ಸಾಲ ಮಂಜೂರು ಮಾಡಲಾಗುತ್ತಿದೆ. ವೃತ್ತಿಪರ ಕೋರ್ಸ್ ಹಾಗೂ ಪದವಿ ಪೂರೈಸಿರುವ ಅಭ್ಯರ್ಥಿಗಳಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಹಾಗಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರು ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ದೇವರಾಜ್ ಅರಸುರವರು ಉತ್ತಮ ರಾಜಕಾರಣಿಯಾಗಿ ಮಾತ್ರವಲ್ಲದೆ ಸಮಾಜ ವಿಜ್ಞಾನಿಯಾಗಿದ್ದರು. ಶ್ರೀಮಂತ ಮನೆತನದÀಲ್ಲಿ ಜನಿಸಿ ದೀನದಲಿತರ ಹಾಗೂ ಶೋಷಿತ ವರ್ಗದವರ ಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಹಿಂದುಳಿದ ಹಾಗೂ ಶೋಷಿತ ಸಮುದಾಯದ ಜನರಿಗೆ ಅರಸು ಅವರ ಕೊಡುಗೆ ಅದಮ್ಯವಾಗಿದೆ. ಎಲ್ಲರೂ ಅವರ ತತ್ವ -ಆದರ್ಶಗಳನ್ನು ಅಳವಡಿಸಿಕೊಂಡು ಸಾಗೋಣ ಎಂದರು.
ಇದೆ ವೇಳೆ ದೇವರಾಜ್ ಅರಸು ನಿಗಮದ ಪ್ರಾತಂಕಿತ ನಿರ್ದೇಶಕ ನಾಗೇಂದ್ರಪ್ಪ ಗೊಣೆಗೆರೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್ ಆರ್.ಮದರಿ ಮಾತನಾಡಿದರು.
ದೇವರಾಜ್ ಅರಸುರವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ಇದಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ರವಿಕುಮಾರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಡಿ.ದೇವರಾಜ್ ಅರಸ್ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನುಸರತ್ ಪರ್ವೀನ್ ಸ್ವಾಗತಿಸಿದರು, ಮಲ್ಲಿಕಾರ್ಜುನ ಕೆ.ಸಿ ನಿರೂಪಿಸಿದರು, ಕುಮಾರ್ ಬಾರ್ಕಿ ವಂದಿಸಿದರು.