ಯಲ್ಲಾಪುರ: ನ್ಯೂ ಮಲಬಾರ್ ಹೊಟೇಲ್ ಮುಂದೆ ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಮಹಮದ್ ಖಾನ್‌ರನ್ನು ಐದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ. ಎರಡುವರೆ ತಿಂಗಳ ಜೀವನ್ಮರಣದ ಹೋರಾಟದ ನಂತರ ಅಪಘಾತದಲ್ಲಿ ಗಾಯಗೊಂಡ ಬಸ್ ಚಾಲಕ ಸಾವನಪ್ಪಿದ್ದಾರೆ.
ಸೆ.5ರ ರಾತ್ರಿ ಯಲ್ಲಾಪುರದ ನ್ಯೂ ಮಲಬಾರ್ ಹೊಟೇಲ್ ಮುಂದೆ ಸರಣಿ ಅಪಘಾತ ನಡೆದಿತ್ತು. ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಲಾರಿ ಓಡಿಸಿಕೊಂಡು ಬಂದ ಶಿವಾಜಿ ರಾಮಚಂದ್ರ ತಂಗಡಗಿ ಎಂಬಾತ ಇನ್ನೊಂದು ಲಾರಿಗೆ ತನ್ನ ವಾಹನ ಗುದ್ದಿ ನಂತರ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಬಸ್ ಚಾಲಕ ಮಹಮದ್ ಖಾನ್, ಬಸ್ ಕ್ಲೀನರ್ ಮಹಮದ್ ಸಲೀಮ್, ಪ್ರಯಾಣಿಕರಾದ ಆಶಾ ಶೆಟ್ಟಿ, ಲಕ್ಷ್ಮೀ ಪೂಜಾರಿ, ಟೆಲ್ಮಾ ಡಿಸೋಜಾ, ಜಯಲಕ್ಷ್ಮೀ ಪೂಜಾರಿ ಹಾಗೂ ನಟೇಶ್ ಮೂಡಲಹಿಪ್ಪೆ ಗಾಯಗೊಂಡಿದ್ದರು.
ಗಾಯಗೊಂಡ ಎಲ್ಲರಿಗೂ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅದಾದ ನಂತರ ಗಂಭೀರ ಗಾಯಗೊಂಡವರಿಗೆ ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಬಸ್ ಚಾಲಕ ಮಹಮದ್ ಖಾನ್ ಮೊದಲು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಾಗಿದ್ದರು. ಅದಾದ ನಂತರ ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆ, ಶಿವಮೊಗ್ಗ ಮಲ್ನಾಡ್ ಲೈಫ್ ಲೈನ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಶಿವಮೊಗ್ಗದ ಮಲ್ನಾಡ್ ಲೈಫ್ ಲೈನ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.