ಮಂಡ್ಯ: ರಸ್ತೆಯ ಮೇಲೆ ಹರಿಯುತ್ತಿದ್ದ ಕೆರೆ ನೀರನ್ನು ಲೆಕ್ಕಿಸದೇ ಬೈಕ್ ಚಲಾಯಿಸಿಕೊಂಡು ಹೋದ ಸವಾರ ಕೊಚ್ಚಿಹೋದ ಘಟನೆ ನಾಗಮಂಗಲ ತಾಲ್ಲೂಕಿನ ಆಣೇಚೆನ್ನಾಪುರ ಗ್ರಾಮದಲ್ಲಿ ನಡೆದಿದೆ. ಕಂಬದಹಳ್ಳಿ ಗ್ರಾಮದ ಮಾಯಣ್ಣ ಗೌಡ(67) ಮೃತ ಬೈಕ್ ಸವಾರನಾಗಿದ್ದಾನೆ.
ಸತತ ಮಳೆಯಿಂದಾಗಿ ಬುಧವಾರ ಆಣೆಚೆನ್ನಾಪುರ ಗ್ರಾಮದ ಬಳಿ ಕೆರೆಯ ಕೋಡಿ ಬಿದ್ದು ನೀರು ರಸ್ತೆ ಮೇಲೆ ರಭಸವಾಗಿ ಹರಿಯುತ್ತಿತ್ತು. ಸಂಜೆ ವೇಳೆ ಗ್ರಾಮಕ್ಕೆ ತೆರಳಲು ಮುಂದಾದ ಮಾಯಣ್ಣ ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರು ಲೆಕ್ಕಿಸದೇ ಬೈಕ್ ನಲ್ಲಿ ತೆರಳಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದರು.
ಘಟನೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಸತತ ಕಾರ್ಯಾಚರಣೆ ಹುಡುಕಾಟ ನಡೆಸಿದ್ದು ಮಾಯಣ್ಣ ಅವರ ಮೃತದೇಹ ಮತ್ತು ಬೈಕ್ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.