ಕಾರವಾರ: ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಕರಾವಳಿ ಟ್ರೇನಿಂಗ್ ಇನ್ಸಿಟ್ಯೂಟ್ ವತಿಯಿಂದ ಅಕ್ಟೋಬರ್ 26 ರಂದು ಕಾರವಾರದ ಬಾಡದಲ್ಲಿರುವ ಶಿವಾಜಿ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಸುಮಾರು 25ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುತ್ತಿರುವುದಾಗಿ ಕಾರವಾರ ರೋಟರಿ ಪಶ್ಚಿಮ ವಲಯದ ಅಧ್ಯಕ್ಷ ಶಿವಾನಂದ ನಾಯ್ಕ ಮಾಹಿತಿ ನೀಡಿದರು.
ಕಾರವಾರದ ಜಿಲ್ಲಾ ಪತ್ರಿಕಾಭವನಲ್ಲಿ ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಾಷ್ ಇಂಡಿಯಾ ಕಂಪೆನಿಯ ಬ್ರಿಡ್ಜ್ ಕಾರ್ಯಕ್ರಮದ ತನ್ನ ಸಾಮಾಜಿಕ ಸೇವಾ ಜವಾಬ್ದಾರಿಯಡಿ ಉದ್ಯೋಗ ಮೇಳಕ್ಕೆ ಬೆಂಬಲ ಒದಗಿಸುತ್ತಿದೆ. ಈ ಮೇಳದಲ್ಲಿ 18 ರಿಂದ 30 ವರ್ಷದೊಳಗಿನ ಐಟಿಐ, ಡಿಪ್ಲೋಮಾ, ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದಾದ್ಯಂತ 1000 ಉದ್ಯೋಗಾವಕಾಶಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದರು.
ಉದ್ಯೋಗ ಮೇಳದಲ್ಲಿ ರಿಲಯನ್ಸ್ ನಿಪ್ಪೊನ್ ಇನ್ಶುರೆನ್ಸ್, ಮೆಡ್‌ಪ್ಲಸ್, SBI ಲೈಫ್ ಇನ್ಶುರೆನ್ಸ್, ಆ‌್ಯಕ್ಸಿಸ್ ಬ್ಯಾಂಕ್, ಮಿಲಾಗ್ರೆಸ್ ಸೊಸೈಟಿ, ಪ್ರವಾಸೋದ್ಯಮ ಇಲಾಖೆ ಹಾಗೂ ರಿಲಾಯನ್ಸ್ ಸ್ಮಾರ್ಟ್ ಸೇರಿದಂತೆ 25ಕ್ಕೂ ಅಧಿಕ ಪ್ರಮುಖ ಕಂಪೆನಿಗಳು ಭಾಗವಹಿಸಲಿವೆ. ಈ ಕಂಪೆನಿಗಳಲ್ಲಿ ಗ್ರಾಹಕ ಸೇವೆ, ಸೇಲ್ಸ್ ಎಕ್ಸಿಕ್ಯೂಟಿವ್‌ಗಳು, ಅಕೌಂಟೆಂಟ್‌ಗಳು, ಕೆಮಿಸ್ಟ್‌ಗಳು, ತಂತ್ರಜ್ಞರು ಮತ್ತು ಇನ್ನೂ ಹಲವು ವಿಧದ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 10,000 ರಿಂದ 45,000ರ ವರೆಗೆ ವೇತನ ಶ್ರೇ಼ಣಿಯನ್ನು ಹೊಂದಿರಲಿದೆ.
ಇನ್ನು ಕ್ರೆಡಿಟ್ ಅಕ್ಸೆಸ್ ಗ್ರಾಮೀಣ ಲಿಮಿಟೆಡ್, ದೇವಭಾಗ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಶೋಬಿತ್ ಸರೋವರ ಪೋರ್ಟಿಕೋ ದಂತಹ ಕಂಪೆನಿಗಳು ಸಹ ಭಾಗವಹಿಸಲಿದ್ದು, ಸ್ಥಳೀಯವಾಗಿ ಹಾಗೂ ರಾಜ್ಯವ್ಯಾಪಿ ಉದ್ಯೋಗಾವಕಾಶದ ಜೊತೆಗೆ ಬೋನಸ್, ಇನ್ಸೆಂಟಿವ್ ಹಾಗೂ ಕೆಲವೆಡೆ ವಸತಿ ಸೌಲಭ್ಯಗಳನ್ನು ಸಹ ಒಳಗೊಂಡಿರಲಿವೆ ಎಂದು ಕರಾವಳಿ ಟ್ರೇನಿಂಗ್ ಇನ್ಸಿಟಿಟ್ಯೂಟ್ ಮುಖ್ಯಸ್ಥ ಆನಂದ ಥಾಮ್ಸೆ ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಕರಾವಳಿ ಟ್ರೇನಿಂಗ್ ಸಂಸ್ಥೆಯ 6361210993 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.