ಗಂಗಾವತಿ: ಹಂಪಿ ಬಳಿಯ ಜನಪ್ರಿಯ ಸನಾಪುರ ಸರೋವರದ ದಡದಲ್ಲಿ 27 ವರ್ಷದ ಇಸ್ರೇಲಿ ಪ್ರವಾಸಿ ಮಹಿಳೆ ಮತ್ತು ಹೋಮ್‌ಸ್ಟೇ ನಿರ್ವಹಿಸುವ 29 ವರ್ಷದ ಮಹಿಳೆ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ.
ಅತ್ಯಾಚಾರದ ವೇಳೆ ಮಹಿಳೆಯರ ಜೊತೆಗಿದ್ದ ಒಡಿಶಾದ ಪುರುಷ ಪ್ರವಾಸಿಗನೊಬ್ಬನನ್ನು ಅಪರಾಧಿಗಳು ತುಂಗಭದ್ರಾ ಎಡದಂಡೆಯ ಕಾಲುವೆಗೆ ತಳ್ಳಿದ ಪರಿಣಾಮ ಆತ ಕಣ್ಮರೆಯಾಗಿದ್ದು, ಯುಎಸ್ ಮತ್ತು ಮಹಾರಾಷ್ಟ್ರದ ಇಬ್ಬರು ಪುರುಷ ಪ್ರವಾಸಿಗರು ಗಾಯಗೊಂಡಿದ್ದಾರೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ರಾತ್ರಿ 10.30ರ ಸುಮಾರಿಗೆ ನಡೆದ ಆಘಾತಕಾರಿ ಘಟನೆಯ ಹಿಂದಿನ ಅಪರಾಧಿಗಳನ್ನು ಪೊಲೀಸರ ಆರು ತಂಡಗಳು ಹುಡುಕುತ್ತಿವೆ. ಈ ಘಟನೆ ಹಂಪಿಯಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ವಿದೇಶಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಸರೋವರದ ಸುತ್ತಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 309 (6) (ಕಳ್ಳತನ ಅಥವಾ ಸುಲಿಗೆ) 311 (ಸಾವು ಅಥವಾ ಗಂಭೀರ ಗಾಯವನ್ನು ಉಂಟುಮಾಡುವ ಉದ್ದೇಶದಿಂದ ದರೋಡೆ ಅಥವಾ ಡಕಾಯಿತಿ) 64 (ಅತ್ಯಾಚಾರ) 70 (1) (ಸಾಮೂಹಿಕ ಅತ್ಯಾಚಾರ) 109 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ ಪ್ರಕಾರ, ನಾಲ್ವರು ಪ್ರವಾಸಿಗರು ಮತ್ತು ಅವರು ತಂಗಿದ್ದ ಹೋಮ್ ಸ್ಟೇ ನಿರ್ವಾಹಕರು ಸನಾಪುರ ಸರೋವರದ ಬಳಿ ವಾಯುವಿಹಾರ ಮಾಡುತ್ತಿದ್ದರು ಮತ್ತು ಸಂಗೀತ ನುಡಿಸುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ 20ರ ಹರೆಯದ ಮೂವರು ಯುವಕರು ಅವರ ಬಳಿ ಬಂದು ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದ್ದಾರೆ. ಹತ್ತಿರದಲ್ಲಿ ಪೆಟ್ರೋಲ್ ಪಂಪ್ ಇಲ್ಲ ಎಂದು ಹೋಮ್ ಸ್ಟೇ ಆಪರೇಟರ್ ಅವರಿಗೆ ಹೇಳಿದಾಗ, ಮೂವರೂ 100 ರೂ. ಕೊಡುವಂತೆ ಕೇಳಿದ್ದಾರೆ. ಆಗ ಐವರು ಯಾವುದೇ ಹಣವನ್ನು ನೀಡಲು ನಿರಾಕರಿಸಿದಾಗ, ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದ ಆರೋಪಿಗಳು, ನಿಂದಿಸಲು ಮತ್ತು ಹಲ್ಲೆ ಮಾಡಲು ಪ್ರಾರಂಭಿಸಿದರು. ಅಲ್ಲದೇ ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಿದರು.
ಪುರುಷ ಪ್ರವಾಸಿಗರು ಕಾಲುವೆಯಿಂದ ಹೊರಬರಲು ಹೆಣಗಾಡುತ್ತಿದ್ದಾಗ, ಮೂವರಲ್ಲಿ ಇಬ್ಬರು ಆರೋಪಿಗಳು ತನ್ನ ಮೇಲೆ ಮತ್ತು ಇಸ್ರೇಲಿ ಪ್ರವಾಸಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ ಮಹಿಳೆ ಹೇಳಿದ್ದಾರೆ.
ಮೂವರು ಅಪರಿಚಿತ ವ್ಯಕ್ತಿಗಳು ತಮ್ಮನ್ನು ನಿಂದಿಸಿದ್ದಾರೆ ಮತ್ತು ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯರಿಂದ ದೂರು ಬಂದಿದೆ ಎಂದು ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಹೇಳಿದ್ದಾರೆ. ಒಡಿಶಾದ ಪ್ರವಾಸಿಗ ಕಾಣೆಯಾಗಿದ್ದಾನೆ ಎಂದು ಸಹ ದೃಢಪಡಿಸಿದರು. “ಆತನನ್ನು ಕಾಲುವೆಗೆ ತಳ್ಳಲಾಗಿದೆ ಎಂದು ಬದುಕುಳಿದವರು ಪೊಲೀಸರಿಗೆ ಮಾಹಿತಿ ನೀಡಿದರು. ಅಂದಿನಿಂದ, ಆತ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ” ಎಂದು ಎಸ್ಪಿ ಹೇಳಿದರು.
ಶ್ವಾನದಳ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಬೆಳಗಿನಿಂದ ಪ್ರವಾಸಿಗರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.