ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತದೆ. ಯುಗಾದಿ=ಯುಗ+ಆದಿ ಎಂದರೆ ಹೊಸ ಯುಗದ ಆರಂಭ ಎಂದರ್ಥ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಧರ್ಮಗ್ರಂಥಗಳ ಪ್ರಕಾರ ರಾಮನ ಪಟ್ಟಾಭಿಷೇಕದ ಸುವರ್ಣಯುಗ ಈ ದಿನದಿಂದ ಪ್ರಾರಂಭವಾಯಿತು ಎನ್ನಲಾಗುತ್ತದೆ.
ಈ ದಿನ ಮುಂಜಾನೆ ಸ್ನಾನ ಕಾರ್ಯಗಳನ್ನು ಮುಗಿಸಿ, ಹೊಸ ಬಟ್ಟೆ ಧರಿಸಿ, ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ. ಸುಖ-ದುಃಖದ ಸಂಕೇತ ಆಗಿರುವ ಬೇವು ಬೆಲ್ಲವನ್ನು ಈ ದಿನ ಸವಿಯುವುದೇ ವಿಶೇಷ.
ಯುಗಾದಿ ಹಬ್ಬದ ಮಹತ್ವ:
ಜನವರಿ, ಫೆಬ್ರವರಿ ಎನ್ನುವುದು ಇಂಗ್ಲಿಷ್ ತಿಂಗಳುಗಳಾದರೆ, ಹಿಂದು ಪಂಚಾಂಗದ ಪ್ರಕಾರ ಮೀನ, ಮೇಷ ತಿಂಗಳುಗಳಾಗಿವೆ. ಹಬ್ಬಗಳು, ಸಂಪ್ರದಾಯ ಇವುಗಳ ಮೇಲೆ ಆಧಾರಿತವಾಗಿದ್ದು, ಸೌರಮಾನ ಯುಗಾದಿ ಎಂಬುವುದು ಹೊಸ ವರ್ಷದ ಆರಂಭವಾಗಿದೆ.
ಪ್ರತಿ ತಿಂಗಳು ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರಿಸುತ್ತಾನೆ, ಯುಗಾದಿಗೆ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮೇಷ ರಾಶಿಯಿಂದ ಸಂಚಾರ ಪ್ರಾರಂಭಿಸುವುದರಿಂದ ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸಲಾಗುತ್ತದೆ.
ಬೇವು-ಬೆಲ್ಲದ ಹಿಂದಿದೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣ:
ಧಾರ್ಮಿಕ ಪ್ರಾಮುಖ್ಯತೆ: ಬೇವಿನ ಎಲೆಗಳು ಜೀವನದಲ್ಲಿ ಕಹಿಯನ್ನು ಸೂಚಿಸುತ್ತವೆ. ಸುತ್ತಲಿನ ಜೀವನದ ಕಹಿಗಳನ್ನು ನೀವು ಒಪ್ಪಿಕೊಳ್ಳಬೇಕು. ಅದಕ್ಕಾಗಿಯೇ ಈ ದಿನದಂದು ಬೇವು ತಿನ್ನುವುದು. ಇನ್ನು ಜೀವನದಲ್ಲಿ ಸುಖ, ಖುಷಿ ಸದಾ ಕಾಲ ತುಂಬಿರಲಿ ಎಂಬ ಸೂಚನೆಯನ್ನು ಈ ಬೆಲ್ಲ ನೀಡುತ್ತದೆ.
ವೈಜ್ಞಾನಿಕ ಪ್ರಾಮುಖ್ಯತೆ: ಬೇವು ಮತ್ತು ಬೆಲ್ಲದ ಮಿಶ್ರಣವು ನಿಮ್ಮ ಚಯಾಪಚಯವನ್ನು ಮತ್ತು ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡುತ್ತದೆ. ರಕ್ತ ಶುದ್ಧೀಕರಣಕ್ಕೆ, ದೇಹದ ಶಾಖ ಕಡಿಮೆ ಮಾಡಲು ಸಹಾಯಕವಾಗಿದೆ.
ಬೇಕಾಗುವ ಸಾಮಗ್ರಿಗಳು: 5-6 ಕಹಿಬೇವಿನ ಎಲೆ, 2 ಚಮಚ ಬೆಲ್ಲ, 3 ಚಮಚ ಕೆಂಪು ಕಲ್ಲು ಸಕ್ಕರೆ, 1-2 ಚಮಚ ಮಾವಿನ ತುರಿ, 15 ಬಾದಾಮಿ, 10 ಗೋಡಂಬಿ, 10 ಒಣದ್ರಾಕ್ಷಿ.
ಮಾಡುವ ವಿಧಾನ: ಮಿಕ್ಸಿಗೆ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ & ಬೆಲ್ಲ ಹಾಕಿ ಪುಡಿ ಮಾಡಿ. ಈ ಮಿಶ್ರಣಕ್ಕೆ ಕಹಿಬೇವಿನ ಎಲೆಯನ್ನು ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ, ಮಿಕ್ಸಿ ಜಾರಿನಿಂದ ಮಿಶ್ರಣವನ್ನು ತೆಗೆದು ಇನ್ನೊಂದು ಪಾತ್ರೆಗೆ ಹಾಕಿ ಅದಕ್ಕೆ ಮಾವಿನ ತುರಿಯನ್ನು ಬೆರೆಸಿ ಸರಿಯಾಗಿ ಮಿಕ್ಸ್ ಮಾಡಿ. ಹಬ್ಬಕ್ಕೆ ಬೇವು-ಬೆಲ್ಲ ರೆಡಿ.